
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಿರೂರು ಗ್ರಾಮದ ಬಳಿ ಗುಡ್ಡ ಕುಸಿದಿರುವ ಸ್ಥಳಕ್ಕೆ ಇಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಶಿರೂರಿಗೆ ಭೇಟಿ ನೀಡಲಿರುವ ಹೆಚ್.ಡಿ.ಕೆ. ಮಳೆ ಹಾನಿ ಪ್ರದೇಶ ಮತ್ತು ಗುಡ್ಡ ಕುಸಿದು ಹಾನಿಯಾದ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ದೆಹಲಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಕುಮಾರಸ್ವಾಮಿ ನಂತರ ಶಿರೂರು ಮಳೆ ಹಾನಿ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ.
ಗುಡ್ಡ ಕುಸಿದ ಸ್ಥಳದಲ್ಲಿ ಐ.ಆರ್.ಬಿ. ಕಂಪನಿ ರಸ್ತೆ ಮೇಲಿನ ಮಣ್ಣು ತೆರವುಗೊಳಿಸಿದ್ದು, ಇನ್ನೊಂದು ಭಾಗದಲ್ಲಿ ಇಂದು ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಗುವುದು. ವಾಹನ ಸಂಚಾರಕ್ಕೆ ರಸ್ತೆ ಮುಕ್ತವಾಗಿದ್ದರೂ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಲಾಗಿದೆ. ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿಯುವ ಆತಂಕದ ಹಿನ್ನೆಲೆಯಲ್ಲಿ ಸಂಚಾರ ನಿಷೇಧಿಸಲಾಗಿದೆ.