ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿ ನಾಪತ್ತೆಯಾದ ಇಬ್ಬರು ಸಂತ್ರಸ್ಥರ ಕುಟುಂಬದವರಿಗೆ ಎರಡು ತಿಂಗಳಲ್ಲಿ ತಲಾ 5 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಭೂಕುಸಿತದಿಂದ ಮಣ್ಣಿನಡಿ ಸಿಲುಕಿದ ಜನರ ರಕ್ಷಣೆ ಹಾಗೂ ಪತ್ತೆ ಹೆದ್ದಾರಿಯಲ್ಲಿ ಬಿದ್ದ ಕಲ್ಲು ಮಣ್ಣು ತೆರವುಗೊಳಿಸಲು ಕ್ರಮ ಜರುಗಿಸಬೇಕೆಂದು ಕೋರಿ ವಕೀಲರಾದ ಸಿ.ಜಿ. ಮಲೈಯಿಲ್ ಮತ್ತು ಕೆ.ಎಸ್. ಸುಭಾಷ್ ಚಂದ್ರ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗಿಯ ಪೀಠದಲ್ಲಿ ನಡೆದಿದೆ.
ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಕರಣದ ವಿಚಾರಣೆ ವಿಚಾರವಾಗಿ ಮಣ್ಣಿನಡಿ ಸಿಲುಕಿದ ಜನರ ರಕ್ಷಣೆ ಮತ್ತು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸರ್ಕಾರ ಸಾಧ್ಯವಾದ ಎಲ್ಲಾ ಪ್ರಯತ್ನ ಕೈಗೊಂಡಿದೆ. ಈಗಾಗಲೇ ನಾಪತ್ತೆಯಾದ 11 ಜನರ ಪೈಕಿ 9 ಮಂದಿಯ ಮೃತದೇಹ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಪ್ರಕರಣ ಮುಂದುವರಿಸುವ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟಿದೆ.
ನಾಪತ್ತೆಯಾದ ಇಬ್ಬರು ಸಂತ್ರಸ್ತರ ಕುಟುಂಬದವರಿಗೆ ಎರಡು ತಿಂಗಳಲ್ಲಿ ತಲಾ ಐದು ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶಿಸಿದೆ.