ಹಾಸನ: ಕಳೆದ ಐದು ದಿನಗಳಿಂದ ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸಕಲೇಶಪುರ, ಆಲೂರು, ಬೇಲೂರು ಭಾಗದಲ್ಲಿ ಮಳೆ ಅಬ್ಬರಕ್ಕೆ ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿದೆ.
ಶಿರಾಡಿ ಘಾಟ್ ನಲ್ಲಿ ಸರಣಿ ಭೂಕುಸಿತ ಸಂಭವಿಸಿದ್ದು, ಮಂಗಳೂರು-ಬೆಂಗಳೂರು ಸಂಚಾರ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ನಲ್ಲಿ ಹಲವೆಡೆ ಭೂಕುಸಿತ, ಗುಡ್ಡಕುಸಿತ ಸಂಭವಿಸಿದೆ.
ದೊಡ್ಡತಪ್ಲು, ಎತ್ತಿನಹಳ್ಳ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡ ಕುಸಿಯುತ್ತಿದ್ದಂತೆ ಅಧಿಕಾರಿಗಳು, ಸಿಬ್ಬಂದಿಗಳು ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಭಾರಿ ಮಳೆ ಕಾರ್ಯಾಚರಣೆಗೂ ಅಡ್ಡಿಯುಂಟು ಮಾಡುತ್ತಿದೆ. ಶಿರಾಡಿ ಘಾಟ್ ನಲ್ಲಿ ಪದೇ ಪದೇ ಭೂಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಬೆಂಗಳೂರಿನಿಂದ-ಮಂಗಳೂರಿಗೆ ತೆರಳುವ ವಾಹನಗಳು ಚರಮಡಿ ಘಾಟ್ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಶಿರಾಡಿಘಟ್ ನಲ್ಲಿ ಮತ್ತಷ್ಟು ಭೂಕುಸಿತ ಆತಂಕ ಎದುರಾಗಿದೆ.