ಹಾಸನ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ಅವಾಂತರಗಳ ಮೇಲೆ ಅವಾಂತರ ಸೃಷ್ಟಿಯಾಗುತ್ತಿದೆ. ಉತ್ತರ ಕನ್ನಡದ ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿದು ಸಾವು-ನೋವು ಸಂಭವಿಸಿರುವ ಬೆನ್ನಲ್ಲೇ ಶಿರಾಡಿಘಾಟ್ ನಲ್ಲಿಯೂ ಅಂತದ್ದೇ ಅವಘಡ ಸಂಭವಿಸಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲು ಬಳಿಯ ಶಿರಾಡಿಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಡರಾತ್ರಿ ಚಲಿಸುತ್ತಿದ್ದ ಕಾರಿನ ಮೇಲೆ ಗುಡ್ಡ ಕುಸಿದಿದೆ.
ಚಲಿಸುತ್ತಿದ್ದ ಓಮಿನಿ ಕಾರಿನ ಮೇಲೆ ಗುಡ್ಡ ಕುಸಿದಿದ್ದು, ಮಣ್ಣು, ಕಲ್ಲಿನ ರಾಶಿಗಳು ಬಿದ್ದಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ಶಿರಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತದಿಂದ ಮಣ್ಣಿನ ರಾಶಿಯೇ ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಶಿರಾಡಿ ಘಾಟ್ ನ ಎರಡು ಬದಿಗಳಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದು ಟ್ರಾಫಿಕ್ ಜಾಮ್ ಸಂಭವಿಸಿದೆ. ಮಣ್ಣು ತೆರವು ಕಾರ್ಯ ನಡೆಸಲಾಗುತ್ತಿದೆ.