ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರವಾಗಿ ಭೂ ಕುಸಿತ ಸಂಭವಿಸುತ್ತಿದ್ದು, ಇಂದೂ ಕೂಡ ಮತ್ತೆ ಗುಡ್ಡ ಕುಸಿತವಾಗಿದೆ.
ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಶಿರಾಡಿ ಘಾಟ್ ರಸ್ತೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಭೂ ಕುಸಿತವಾಗುತ್ತಿದೆ. ನೋಡ ನೋಡುತ್ತಿದ್ದಂತೆಯೇ ಮಣ್ಣು, ಗುಡ್ಡ, ಬೆಟ್ಟಗಳು ಧರೆಗುಳಿ ಬೀಳುತ್ತಿದ್ದು,ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಮಣ್ಣಿನ ರಾಶಿ, ಮರಗಳು, ಬೃಹತ್ ಕಲ್ಲುಗಳು ಬೀಳುತ್ತಿವೆ.
ಸಕಲೇಶಪುರದ ದೊಡ್ಡತಪ್ಲು ಬಳಿ ಇಂದು ಕೂಡ ಮತ್ತೆ ಭೂ ಕುಸಿತ ಸಂಭವಿಸಿದೆ. ಪ್ರವಾಹದಂತೆ ಬೆಟ್ಟದ ಮೇಲಿಂದ ಮಣ್ಣು-ಕಲ್ಲುಗಳೊಂದಿಗೆ ಕೆಸರು ನೀರು ಧುಮ್ಮಿಕ್ಕಿ ಹರಿದಿದೆ. ರಂಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಎರಡು ದಿನಗಳ ಹಿಂದಷ್ಟೇ ಭೂ ಕುಸಿತದಿಂದ ಉಂಟಾದ ಮಣ್ಣು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಇಂದು ಮತ್ತೆ ಭೂ ಕುಸಿತ ಸಂಭವಿಸಿದ್ದು, ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಮತ್ತೆ ಸ್ಥಗಿತಗೊಂಡಿದೆ. ಭಾರಿ ಮಳೆ ಮುಂದುವರಿದ ಕಾರಣ ಈ ಭಾಗದಲ್ಲಿ ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು, ಆತಂಕಕ್ಕೆ ಕಾರಣವಾಗಿದೆ.