ಹಾಸನ: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಹಲವೆಡೆ ಭೂಕುಸಿತ ಅವಘಡಗಳು ಹೆಚ್ಚುತ್ತಿವೆ. ಒಂದು ವಾರದ ಹಿಂದಷ್ಟೇ ಶಿರಾಡಿ ಘಾಟ್ ನಲ್ಲಿ ಭೂ ಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ.
ಹಾಸನ ಜಿಲ್ಲೆಯ ಸಕಲೇಶಪುರ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಶಿರಾಡಿ ಘಾಟ್ ನ ದೊಡ್ಡತಪ್ಲೆ ಬಳಿ ಮತ್ತೆ ಭೂ ಕುಸಿತ ಸಂಭವಿಸಿದೆ. ಚಲಿಸುತ್ತಿದ್ದ ವಾಹನಗಳ ಮೇಲೆಯೇ ಮಣ್ಣು ಕುಸಿದು ಬಿದ್ದಿದ್ದು, ಮಣ್ಣಿನಡಿ ವಾಹನಗಳು ಸಿಲುಕಿಕೊಂಡಿವೆ.
ಎರಡು ಟ್ಯಾಂಕರ್, ಕಾರುಗಳು, ಗೂಡ್ಸ್ ಸೇರಿದಂತೆ ಒಟ್ಟು 6 ವಾಹನಗಳು ಮಣ್ಣಿನಡಿ ಸಿಲುಕಿದ್ದು, ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಕಳೆದ ವಾರ ಕೂಡ ದೊಡ್ಡತಪ್ಲೆ ಬಳಿ ಇದೇ ಜಾಗದಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಇಂದು ಕೂಡ ಅದೇ ಜಾಗದಲ್ಲಿ ಗುಡ್ಡ ಕುಸುತ ಸಂಭವಿಸಿದ್ದು, ಮಣ್ಣು ತೆರವು ಕಾರ್ಯಾಚರಣೆ ಮಾಡುತ್ತಿದ್ದರೂ ಇನ್ನೊಂದೆಡೆ ಮತ್ತೆ ಗುಡ್ಡ ಕುಸಿಯುತ್ತಿದೆ. ಶಿರಾಡಿ ಘಾಟ್ ನಲ್ಲಿ ಭೂ ಕುಸಿತ ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನಗಳನ್ನು ಗುಂಡ್ಯ ಬಳಿ ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ.