alex Certify ಶಿವಮೊಗ್ಗ : ನೋಂದಾಯಿತ ಆಟೋರಿಕ್ಷಾಗಳಿಗೆ ಪರವಾನಿಗೆ ನೀಡಲು ಜಿಲ್ಲಾಧಿಕಾರಿ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಮೊಗ್ಗ : ನೋಂದಾಯಿತ ಆಟೋರಿಕ್ಷಾಗಳಿಗೆ ಪರವಾನಿಗೆ ನೀಡಲು ಜಿಲ್ಲಾಧಿಕಾರಿ ಸೂಚನೆ

ಶಿವಮೊಗ್ಗ : ಹೊಸದಾಗಿ ಖರೀದಿಸಿ ನೋಂದಣಿಯಾದ ಆಟೋರಿಕ್ಷಾಗಳಿಗೆ ಪರವಾನಿಗೆಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸೆಲ್ವಮಣಿ ಆರ್ ಸೂಚನೆ ನೀಡಿದರು.

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಟೋರಿಕ್ಷಾ ಪರವಾನಗಿ ನೀಡುವ ಕುರಿತು ಏರ್ಪಡಿಸಲಾಗಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದಲ್ಲಿ ನೋಂದಾಯಿತ 304 ಸಂಖ್ಯೆಯ ಆಟೋರಿಕ್ಷಾಗಳಿಗೆ ಪರವಾನಗಿ ಬಾಕಿ ಇದ್ದು ಇವುಗಳಿಗೆ ಪರವಾನಗಿ ನೀಡುವಂತೆ ಸೂಚಿಸಿದರು. ಹಾಗೂ ನಿಯಮದನ್ವಯ 15 ವರ್ಷಗಳಿಗೂ ಮೇಲ್ಪಟ್ಟ ವಾಹನಗಳ ನವೀಕರಣ ಸಾಧ್ಯವಿಲ್ಲವೆಂದು ತಿಳಿಸಿದರು.ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕರಪ್ಪ ಮಾತನಾಡಿ, ನಗರದಲ್ಲಿ ಸುಮಾರು 4 ಸಾವಿರ ಆಟೋಗಳು ಚಾಲನೆಯಲ್ಲಿವೆ. ಸುಮಾರು 2 ಸಾವಿರ ಆಟೋಗಳ ನವೀಕರಣ ಬಾಕಿ ಇದೆ.

ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ನಗರದಲ್ಲಿ ಕೇವಲ 304 ಅಲ್ಲ, ಸುಮಾರು 1200 ನೋಂದಾಯಿತ ಆಟೋಗಳಿದ್ದು ಅವುಗಳಿಗೆಲ್ಲ ಪರವಾನಗಿ ನೀಡಬೇಕು. ಹಾಗೂ ಶೋ ರೂಮಿನವರು ಆಟೋ ಖರೀದಿ ವೇಳೆ ಪರವಾನಗಿ ಕೊಡಿಸುತ್ತೇವೆಂದು 30 ರಿಂದ 40 ಸಾವಿರದವರೆಗೆ ಹಣ ವಸೂಲಿ ಮಾಡುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಹಾಗೂ ಆಟೋ ಚಾಲನೆ ವ್ಯಾಪ್ತಿಯನ್ನು 20 ಕಿ.ಮೀ ವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಆನ್ಲೈನ್ನಲ್ಲಿ ಪರವಾನಗಿ ಬಾಕಿ ಕಡಿಮೆ ತೋರಿಸುತ್ತಿದ್ದು, ಈ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಪರವಾನಗಿ ನೀಡಲಾಗುವುದು. ಹಾಗೂ ಪರವಾನಗಿ ಪಡೆಯದ ಆಟೋಗಳ ನೋಂದಣಿ ನಿಲ್ಲಿಸುವಂತೆ ತಿಳಿಸಿದರು.

ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಗರದಲ್ಲಿ ಹೊಸದಾಗಿ ಆಟೋರಿಕ್ಷಾಗಳನ್ನು ಖರೀದಿಸಿ ನೋಂದಣಿ ಮಾಡಿಸಿಕೊಂಡವರಿಗೆ ಪರವಾನಿಗಿ ನೀಡಬೇಕು. ಹಾಗೂ ನವೀಕರಣಕ್ಕೆ ಅರ್ಹರಾದವರಿಗೆ ನವೀಕರಣ ಮಾಡಬೇಕೆಂದರು ತಿಳಿಸಿದರು.ಆಟೋ ಚಾಲಕರು ಮಾತನಾಡಿ ಆಟೋಗಳಿಗೆ ರೆಟ್ರೊ ಎಲೆಕ್ಟ್ರಿಕ್ ಸ್ಟಿಕ್ಕರ್ ಅಳವಡಿಕೆ ಮಾಡಬೇಕೆಂಬ ನಿಯಮವನ್ನು ತರಲಾಗಿದೆ. ಇದರಿಂದ ಚಾಲಕರಿಗೆ ರೂ.2000 ವರೆಗೆ ಖರ್ಚು ಬರುತ್ತದೆ. ಹಾಗೂ ಎಫ್ಸಿ ವೇಳೆ ಇದರ ಬಿಲ್ಲನ್ನು ಕೇಳಲಾಗುವುದರಿಂದ ತೊಂದರೆ ಆಗುತ್ತಿದ್ದು, ಸ್ಟಿಕ್ಕರ್ನಿಂದ ವಿನಾಯಿತಿ ಕೋರಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಸ್ಟಿಕ್ಕರ್ ಹಾಕಿಸುವುದು ಒಳ್ಳೆಯದು. ಸ್ಟಿಕ್ಕರ್ ಅಳವಡಿಕೆ ಕುರಿತಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದಲ್ಲಿನ ಗೊಂದಲದ ಬಗ್ಗೆ ಸಂಬಂಧಿಸಿದ ಆಯುಕ್ತರಿಗೆ ಪತ್ರ ಬರೆದು ಸ್ಪಷ್ಪನೆ ಪಡೆಯಲಾಗುವುದು. ಹಳೇ ಸ್ಟಿಕ್ಕರ್ ಇರುವವರು ಹೊಸದಾಗಿ ಹಾಕಿಸುವ ಅವಶ್ಯಕತೆ ಇಲ್ಲವೆಂದರು.

ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಆಟೋ ನಿಲ್ಲಿಸಿದ ಚಾಲಕರಿಗೆ ಸರ್ಕಲ್ ಇನ್ಸ್ಪೆಕ್ಟರ್ ದಂಡ ವಿಧಿಸಬೇಕು. ಜೋರಾಗಿ ಹಾರ್ನ್ ಕಂಡುಬಂದಲ್ಲಿ ಪೊಲೀಸ್ ಠಾಣೆಯ ಸಂಖ್ಯೆಗೆ ಒಂದು ದೂರು ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದು. ಆಟೋಗಳಲ್ಲಿ ಮೀಟರ್ ಹಾಕಬೇಕು. ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮಾತ್ರ ಒಂದೂ ಅರ್ಧ ಚಾರ್ಜ್ ತೆಗೆದುಕೊಳ್ಳಬೇಕು. ನಂತರ ತೆಗೆದುಕೊಳ್ಳುವ ಹಾಗಿಲ್ಲ. ಈ ಸಮಯ ಮತ್ತು ದರದ ಕುರಿತು ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಬೋರ್ಡ್ ಬರೆಸಿ ಹಾಕಿಸುವಂತೆ ತಿಳಿಸಿದರು.

ಪ್ರೀ-ಪೇಯ್ಡ್ ಕೌಂಟರ್ ತೆರೆಯಲು ಸೂಚನೆ : ಮೊದಲನೇ ಹಂತದಲ್ಲಿ ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಇನ್ನು 20 ದಿನಗಳ ಒಳಗೆ ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್ಗಳನ್ನು ತೆರೆಯಬೇಕೆಂದು ಆರ್ಟಿಓ ಅಧಿಕಾರಿಗೆ ಸೂಚಿಸಿದರು.

ಬಸ್ ಬಿಡಲು ಸೂಚನೆ : ರೈಲು ನಿಲ್ದಾಣದಿಂದ ಬಸ್ಸ್ಟ್ಯಾಂಡ್ ಕಡೆ ತೆರಳಲು ಕೆಎಸ್ಆರ್ಟಿಸಿ ಬಸ್ ಕಾರ್ಯಾಚರಣೆಯನ್ನು 10 ದಿನಗಳ ಒಳಗೆ ಆರಂಭಿಸಬೇಕೆಂದು ಕೆಎಸ್ಆರ್ಟಿಸಿ ಡಿಸಿ ಯವರಿಗೆ ಸೂಚಿಸಿದ ಅವರು ಬಸ್ ನಿಲ್ದಾಣ ಸ್ಥಳ ನಿಗದಿ ಕುರಿತು ಆರ್ಟಿಓ, ಆಟೋ, ಬಸ್ ಚಾಲಕರ ಸಂಘ, ಟ್ರಾಫಿಕ್ ಪೊಲೀಸ್, ಕೆಎಸ್ಆರ್ಟಿಸಿ ಯವರು ಸರ್ವೇ ಮಾಡಿ ನಿಗದಿಪಡಿಸುವಂತೆ ಸೂಚನೆ ನೀಡಿದರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...