ಶಿವಮೊಗ್ಗ: ವಿನೋಬನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಿ.ಬಾಲು ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1994ರಲ್ಲಿ ಸ್ಥಾಪನೆಗೊಂಡ ಈ ಶಾಲೆ ನಗರದ ಅತ್ಯುತ್ತಮ ಶಾಲೆ ಎಂಬ ಖ್ಯಾತಿ ಪಡೆದಿದೆ. ಎಸ್‌ಎಸ್‌ಎಲ್‌ಸಿಯಲ್ಲಿ 2022ರಲ್ಲಿ ಶೇ.79, ಹಾಗೂ 23ರಲ್ಲಿ ಶೇ.85ರಷ್ಟು ಫಲಿತಾಂಶ ಬಂದಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ್ ಮಾತನಾಡಿ, ಶಾಲೆಗೆ ದಾಖಲಾಗುವ ಎಲ್ಲಾ ಮಕ್ಕಳಿಗೆ ಪ್ರತಿವರ್ಷ ಶೈಕ್ಷಣಿಕ ಉಚಿತ ಕಿಟ್ ವಿತರಿಸಲಾಗುತ್ತಿದ್ದು, ಕಂಪ್ಯೂಟರ್ ಆಧಾರಿತ ಶಿಕ್ಷಣ ನೀಡಲಾಗುತ್ತಿದೆ. ವಿಶಾಲವಾದ, ಸುಸಜ್ಜಿತವಾದ, ಹೈಟೆಕ್ ಕೊಠಡಿಗಳಿದ್ದು, ಜೂನ್ ಆರಂಭದಲ್ಲಿ ವಿಶೇಷ ತರಗತಿಗಳು ಹಾಗೂ ಸಂಜೆ ವೇಳೆಯಲ್ಲಿ ಗುಂಪು ಅಧ್ಯಯನ, ಗುಣಮಟ್ಟದ ಬಿಸಿಯೂಟ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ಹೀಗೆ ಹಲವಾರು ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ. ನುರಿತ ಹಾಗೂ ಅನುಭವಿ ಶಿಕ್ಷಕರ ತಂಡ ಶಾಲೆಯಲ್ಲಿದೆ ಎಂದರು.
2021ರಿಂದ ಇಲ್ಲಿಯವರೆಗೂ 3 ವರ್ಷದ ಅವಧಿಯಲ್ಲಿ ಸುಸಜ್ಜಿತವಾದ ರಂಗಮಂದಿರ, ಆರು ಹೈಟೆಕ್ ಕೊಠಡಿ, ಒಂದು ಸಭಾಂಗಣ ನಿರ್ಮಾಣವಾಗಿದ್ದು, ಇದಕ್ಕೆ ಮೂಲಕಾರಣ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಎಂದರು.
ಶಾಲೆ ಇಷ್ಟೆಲ್ಲಾ ಅಭಿವೃದ್ಧಿ, ಉತ್ತಮ ಫಲಿತಾಂಶ ಬರಲು ಡಿಡಿಪಿಐ, ಡಿ.ಇ.ಓ., ಶಾಲೆಯ ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಎಸ್‌ಡಿಎಂಸಿ ಸದಸ್ಯರು, ಶಾಲೆಯ ಸುತ್ತಮುತ್ತಲಿನ ಸಂಘ ಸಂಸ್ಥೆಗಳು ಕಾರಣವಾಗಿರುವುದರಿಂದ ಅವರೆಲ್ಲರಿಗೂ ಅಭಿನಂದನೆಗಳು ಎಂದ ಅವರು, ಆಂಗ್ಲ ಮಾಧ್ಯಮ ಆರಂಭಿಸುವ ಉದ್ದೇಶವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್, ರಮೇಶ್, ಕವಿತ, ವಿನೋದ್, ಶರಣ್, ಸಂತು, ಶುಭಂ ಹೋಟೆಲಿನ ಮಾಲೀಕ ಚಂದ್ರಹಾಸ್ ಇನ್ನಿತರರು ಉಪಸ್ಥಿತರಿದ್ದರು.