ಶಿವಮೊಗ್ಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಶುಕ್ರವಾರದಂದು ಅದ್ದೂರಿಯಾಗಿ ನೆರವೇರಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಈಶ್ವರಪ್ಪ ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡಿದ್ದು, ಮೆರವಣಿಗೆಯಲ್ಲಿ ಕೆಲವರು ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ.
ಮೆರವಣಿಗೆಯಲ್ಲಿ ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಘೋಷಣೆಗಳು ಮೊಳಗಿದ್ದು, ಯುವಕರು ಮಾತ್ರವಲ್ಲದೆ ಮಹಿಳೆಯರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗಣಪತಿ ಮೂರ್ತಿ ಹಿಂಭಾಗದಲ್ಲಿ ವೀರ ಸಾವರ್ಕರ್ ಭಾವಚಿತ್ರವನ್ನು ಅಳವಡಿಸಲಾಗಿದ್ದು, ಜೊತೆಗೆ ಬೃಹತ್ ಮಹಾದ್ವಾರವನ್ನೂ ನಿರ್ಮಿಸಲಾಗಿತ್ತು.
ಅಲ್ಲದೇ ಪ್ರಮುಖ ವೃತ್ತಗಳಲ್ಲಿ ಯುವಕರು, ಯುವತಿಯರು ಸ್ಟೆಪ್ ಹಾಕುವ ಮೂಲಕ ಉತ್ಸವಕ್ಕೆ ಮತ್ತಷ್ಟು ಕಳೆ ತಂದರು. ಇದರ ಮಧ್ಯೆ ಕೆಲವರು ಅಶೋಕ ಸ್ತಂಭದ ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜ ಕಟ್ಟಿದ್ದು, ಇದು ಗಮನಕ್ಕೆ ಬರುತ್ತಲೇ ಪೊಲೀಸರು ಅವುಗಳನ್ನು ತೆರವುಗೊಳಿಸಿದ್ದಾರೆ.