ಶಿವಮೊಗ್ಗ: ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿಯ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವವನ್ನು 15 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ದೇವಸ್ಥಾನದ ಧರ್ಮದರ್ಶಿಗಳ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷ ಎಸ್.ಕೆ. ಮರಿಯಪ್ಪ ತಿಳಿಸಿದರು.
ಅವರು ಇಂದು ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಮಾರು 31 ವರ್ಷಗಳಿಂದ ಶರವನ್ನವರಾತ್ರಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಕೂಡ ಸೆ.26 ರಿಂದ ಅ.9 ರವರೆಗೆ ವೈಭವದಿಂದ ಆಚರಿಸಲಾಗುವುದು. ಈ ಬಾರಿಯ ವಿಶೇಷ ಅಲಂಕಾರ ಎಂದರೆ ಶ್ರೀರಾಜರಾಜೇಶ್ವರಿ ದೇವಿಯಾಗಿದೆ. ಈ ಮಣ್ಣಿನ ಮೂರ್ತಿಯನ್ನು ಕೊಲ್ಕತ್ತಾದ ಪ್ರಸಿದ್ದ ಶಿಲ್ಪಿ ಮಧುಸೂದನ್ ಪಾಲ್ ಮತ್ತು ತಂಡದವರು ಮಾಡಿದ್ದಾರೆ ಎಂದರು.
ಸೆ.26 ರ ಬೆಳಿಗ್ಗೆ 6.30ಕ್ಕೆ ಶ್ರೀ ರಾಜರಾಜೇಶ್ವರಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ದೇವಿಯ ಮುಂಭಾಗದಲ್ಲಿ ಪ್ರತಿನಿತ್ಯ ಚಂಡಿಕಾಯಾಗ, ಚಂಡಿಕಾಪಾರಾಯಣ, ಸಹಸ್ರಾರ್ಚನೆ, ಪೂಜೆ, ಪೂರ್ಣಾಹುತಿ ಪ್ರಸಾದ ವಿನಿಯೋಗ ಇರುತ್ತದೆ. ನಗರದ ಬೇರೆ ಬೇರೆ ಬಡಾವಣೆಗಳಿಂದ ಭಕ್ತರು ಸೇವಾಕರ್ತರಾಗಿರುತ್ತಾರೆ ಎಂದರು.
26 ರ ಸಂಜೆ 6 ಗಂಟೆಗೆ ಕಲ್ಲಗಂಗೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀವಿನಯಾನಂದ ಸರಸ್ವತಿ ಸ್ವಾಮೀಜಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಮಲೆನಾಡು ಕೋಗಿಲೆ ಗರ್ತಿಕೆರೆ ರಾಘಣ್ಣ ಆಗಮಿಸಲಿದ್ದು, ಎಸ್.ಕೆ. ಮರಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಗರ್ತಿಕೆರೆ ರಾಘಣ್ಣ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರತಿದಿನ ಸಂಜೆ 4 ರಿಂದ ನಗರದ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯಲಿದ್ದು, ಪ್ರತಿದಿನ ಎರಡೆರಡು ಭಜನಾ ಮಂಡಳಿಗಳ ಮಾತೆಯರಿಂದ ಭಜನೆ ನಡೆಯಲಿದೆ. ಸಂಜೆ 6 ರಿಂದ ಸಹಚೇತನ ನಾಟ್ಯ ಮಂಡಳಿ ವಿದ್ಯಾರ್ಥಿಗಳಿಂದ ನೃತ್ಯ ಸೇವೆ, 6.30 ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಸಂಗೀತ, ವೀಣಾ, ಗಿಟಾರ್ ವಾದನ, ವಯೋಲಿನ್ ವಾದನ, ಹರಿಕಥೆ, ಯಕ್ಷಗಾನ, ತಾಳ ಮದ್ದಳೆ, ಸ್ಯಾಕ್ಸೋಫೋನ್ ವಾದನ, ಕರ್ನಾಟಕ ಶಾಸ್ತ್ರೀಯ ಸಂಗೀತ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ ಎಂದರು.
ಅ.9 ರಂದು ಲೋಕಕಲ್ಯಾಣಾರ್ಥವಾಗಿ ಶತ ಚಂಡಿಯಾಗವು ಒಟ್ಟು 15 ಕ್ಕೂ ಹೆಚ್ಚು ಪುರೋಹಿತರೊಂದಿಗೆ ನಡೆಯಲಿದ್ದು, ಯಾಗಕ್ಕೆ ವಿಶೇಷವಾಗಿ ಒಂದು ಕ್ವಿಂಟಾಲ್ ಅಕ್ಕಿಯ ಪರಮಾನ್ಯ, 20 ಕೆ.ಜಿ.ತುಪ್ಪ ಹಾಗೂ ಚೆಕ್ಕೆ ಇತ್ಯಾದಿಗಳನ್ನು ಸಮರ್ಪಿಸಲಾಗುವುದು. ಇದರೊಂದಿಗೆ 100 ಸುಹಾಸಿನಿಯರಿಗೆ ಬಾಗಿನ ನೀಡಲಾಗುವುದು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಅ.ಪ.ರಾಮಭಟ್ಟ ತಿಳಿಸಿದರು.
ಅ.10 ರಂದು ಶ್ರೀ ರಾಜರಾಜೇಶ್ವರಿ ದೇವಿಯ ರಾಜಬೀದಿ ಉತ್ಸವ ರವೀಂದ್ರನಗರ ಮುಖ್ಯ ರಸ್ತೆಗಳಲ್ಲಿ ಸಾಗಲಿದೆ. ನಂತರ ದೇವಿಯ ಮೂರ್ತಿಯನ್ನು ಖಂಡೋಬರಾವ್ ಅವರ ಅಮೂಲ್ಯ ಶೋಧಕ್ಕೆ ನೀಡಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಎಸ್.ಪಿ.ಶೇಷಾದ್ರಿ, ಉಮಾಶಂಕರ ಉಪಾಧ್ಯ, ರುಕ್ಮಿಣಿ ವೇದವ್ಯಾಸ್, ಚಂದ್ರಶೇಖರ್, ರಾಜೇಂದ್ರ ಮೊದಲಾದವರು ಉಪಸ್ಥಿತರಿದ್ದರು.