ಶಿವಮೊಗ್ಗ ನಗರದ ಕೋಟೆ ಭೀಮೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಘಟನಾ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾಪೂರ್ವ ಮೆರವಣಿಗೆ ಅದ್ಧೂರಿಯಾಗಿ ಶಾಂತಿಯುತವಾಗಿ ನಡೆದಿದ್ದು, ಇಂದು ಬೆಳಗಿನ ಜಾವ 4 ಗಂಟೆಗೆ ತುಂಗಾನದಿಯ ಭೀಮನಮಡುವಿನಲ್ಲಿ ವಿಸರ್ಜಿಸಲಾಯಿತು.
ನಿನ್ನೆ ಬೆಳಗ್ಗೆ 10 ಗಂಟೆಗೆ ಭೀಮೇಶ್ವರ ದೇವಸ್ಥಾನ ಆವರಣದಿಂದ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಆರಂಭವಾದ ಮೆರವಣಿಗೆ ಎಸ್.ಪಿ.ಎಂ. ರಸ್ತೆ ಮೂಲಕ ರಾಮಣ್ಣಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ. ಎಎ ವೃತ್ತ, ನೆಹರೂ ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ, ಜೈಲ್ ಸರ್ಕಲ್, ಕುವೆಂಪು ರಸ್ತೆ, ಶಿವಮೂರ್ತಿ ಸರ್ಕಲ್, ಮಹಾವೀರ ಸರ್ಕಲ್, ಬಸವೇಶ್ವರ ವೃತ್ತ ಹಾದು ಸ್ಟೇಷನ್ ರಸ್ತೆ ಮೂಲಕ ಭೀಮೇಶ್ವರ ದೇವಸ್ಥಾನಕ್ಕೆ ಆಗಮಿಸಿ ಭೀಮನ ಮಡುವಿನಲ್ಲಿ ವಿಸರ್ಜನೆ ಮಾಡಲಾಯಿತು.
ಮೆರವಣಿಗೆಯಲ್ಲಿ ಬೆಕ್ಕಿನ ಕಲ್ಮಠದ ಶ್ರೀಗಳು, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಡಿ.ಎಸ್. ಅರುಣ್, ಎಂ.ಪಿ. ರೇಣುಕಾಚಾರ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಹಿಂದೂ ಸಂಘಟನಾ ಮಹಾಮಂಡಳಿಯ ಸುರೇಶ್ ಕುಮಾರ್, ಚನ್ನಬಸಪ್ಪ ಮೊದಲಾದವರು ಭಾಗವಹಿಸಿದ್ದರು.
ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ವಾದ್ಯಗೋಷ್ಠಿಗಳ ತಾಳಕ್ಕೆ ತಕ್ಕಂತೆ ಸೇರಿದ್ದ ಸಾವಿರಾರು ಯುವಕರು, ಯುವತಿಯರು ನೃತ್ಯ ಮಾಡಿದರು. ಹಿಂದೆಂದೂ ಕಾಣದ ಜನಸಾಗರ ಈ ಬಾರಿ ಸೇರಿತ್ತು. ಸುಮಾರು 3 ಲಕ್ಷಕ್ಕೂ ಅಧಿಕ ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ದುರ್ಗಿಗುಡಿಯ ವಜ್ರಕಾಯ ಗೆಳೆಯರ ಬಳಗದಿಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅಭಿಮಾನಿ ಬಳಗದಿಂದ ಅನ್ನಸಂತರ್ಪಣೆ ಮಾಡಲಾಯಿತು. ಅದೇ ರೀತಿ ವಿವಿಧ ಸಂಘ ಸಂಸ್ಥೆಗಳಿಂದ ತಿಂಡಿ, ನೀರು, ಪಾನಕ, ಸಿಹಿ ವಿತರಿಸಲಾಯಿತು.
ಪೂರ್ವ ವಲಯ ಐಜಿಪಿ ತ್ಯಾಗರಾಜ್, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಎಸ್.ಪಿ. ಲಕ್ಷ್ಮಿ ಪ್ರಸಾದ್, ಡಾ. ಶೇಖರ್, ಮೊದಲಾದವರು ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು.