ಹಾವೇರಿ: ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪಚುನಾವಣಾ ಅಖಾಡ ಜಿದ್ದಾಜಿದ್ದಿನಿಂದ ಕೂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ನಾಯಕರು ಹಾಗೂ ಅಭ್ಯರ್ಥಿಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಈ ನಡುವೆ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗಂಭೀರ ಪ್ರಕರಣಗಳಿರುವ ಬಗ್ಗೆ ಸ್ವತಃ ಹಾವೇರಿ ಎಸ್ ಪಿ ಮಾಹಿತಿ ನೀಡಿದ್ದಾರೆ.
ಹಾವೇರಿಯಲ್ಲಿ ಮಾತನಾಡಿರುವ ಎಸ್ ಪಿ ಅಂಶುಕುಮಾರ್, ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ರೌಡಿಶೀಟರ್. ಯಾಸೀರ್ ಪಠಾಣ್ ವಿರುದ್ಧ ಈ ಹಿಂದೆಯೇ ರೌಡಿಶೀಟರ್ ಓಪನ್ ಆಗಿದೆ. ಅದನ್ನು ಈವರೆಗೂ ಹಿಂತೆಗೆದುಕೊಂಡಿಲ್ಲ ಎಂದು ತಿಳಿಸಿದರು.
ಯಾಸೀರ್ ಓರ್ವ ರೌಡಿಶೀಟರ್ ಎಂದು ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಜ್ಜಂಪೀರ್ ಖಾದ್ರಿ ಕೂಡ ಹೇಳಿದ್ದರು. ಆದರೆ ಯಾಸೀರ್ ಇದನ್ನು ಅಲ್ಲಗಳೆದಿದ್ದರು. ಯಾಸೀರ್ ವಿರುದ್ಧ ರೌಡಿಶೀಟರ್ ಇದ್ದರೂ ನಾಮಪತ್ರ ಸಲ್ಲಿಕೆ ವೇಳೆ ಉಲ್ಲೇಖ ಮಾಡಿಲ್ಲ. ಅಲ್ಲದೇ ತನ್ನ ವಿರುದ್ಧ ಯಾವುದೇ ಪ್ರಕರಣಗಳು ಇಲ್ಲ ಎಂದಿದ್ದರು. ಯಾಸೀರ್ ವಿರುದ್ಧ ಎರಡು ಮೂರು ಪ್ರಕರಣಗಳಿವೆ ಎಂದು ತಿಳಿದುಬಂದಿದೆ. ಇದೇ ವಿಚಾರ ಇದೀಗ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದ್ದು, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಾನೂನು ಸಮರಕ್ಕೆ ಮುಂದಾಗುವ ಸಾಧ್ಯತೆ ಇದೆ.