
ಬೆಂಗಳೂರು: ಶಿಗ್ಗಾಂವಿ ಉಪಚುನಾವಣಾ ಅಖಾಡದಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಜ್ಜಂಪೀರ್ ಖಾದ್ರಿ ಅವರನ್ನು ಸಚಿವ ಜಮೀರ್ ಅಹ್ಮದ್ ಖಾನ್ ಬೆಂಗಳೂರಿನಲ್ಲಿಯೇ ಲಾಕ್ ಮಾಡಿದ್ದಾರೆ.
ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ವಿರುದ್ಧವೇ ಬಂಡಾಯ ಸಾರಿದ್ದ ಅಜ್ಜಂಪೀರ್ ಖಾದ್ರಿ, ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅವರ ಮನವೊಲಿಸಿ ಬೆಂಗಳೂರಿಗೆ ಕರೆತಂದಿದ್ದ ಸಚಿವ ಜಮೀರ್ ಅಹ್ಮದ್, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಕೆ ಮಾಡಿದ್ದರು. ಸಿಎಂ ಸೂಚನೆ ಮೇರೆಗೆ ನಾಮಪತ್ರ ಹಿಂಪಪಡೆಯಲು ಖಾದ್ರಿ ಒಪ್ಪಿದ್ದಾರೆ. ಆದರೂ ಅವರನ್ನು ಬೆಂಗಳೂರಿನಲ್ಲಿಯೇ ಲಾಕ್ ಮಾಡಲಾಗಿದೆ.
ಒಂದು ವೇಳೆ ಮನಸ್ಸು ಬದಲಿಸಿ ಪಕ್ಷೇತರ ಅಭ್ಯರ್ಥಿಯಾಗಿ ಮುಂದುವರೆದರೆ ಕಷ್ಟ ಎಂಬ ಕಾರಣಕ್ಕೆ ಅ.30ರವರೆಗೂ ಬೆಂಗಳೂರಿನಲ್ಲಿಯೇ ಇರುವಂತೆ ಅಜ್ಜಂಪೀರ್ ಖಾದ್ರಿಗೆ ಸೂಚಿಸಲಾಗಿದೆ. ಅಂದು ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ರೊಂದಿಗೆ ಶಿಗ್ಗಾಂವಿಗೆ ತೆರಳಿ ನಾಮಪತ್ರ ಹಿಂಪಡೆಯುವಂತೆ ತಿಳಿಸಲಾಗಿದೆ.
ಸಚಿವ ಜಮೀರ್ ಅಹ್ಮದ್ ಖಾದ್ರಿ ಅವರನ್ನು ತಮ್ಮ ಸರ್ಕಾರಿ ನಿವಾಸದಲ್ಲಿಯೇ ಲಾಕ್ ಮಾಡಿದ್ದಾರೆ. ಯಾರ ಸಂಪರ್ಕಕ್ಕೂ ಖಾದ್ರಿ ಸಗದಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.