
ನಟಿ ಸ್ವಸ್ತಿಕಾ ಮುಖರ್ಜಿ, ಬೆಂಗಾಲಿ ಚಲನಚಿತ್ರೋದ್ಯಮದಲ್ಲಿ, ನೇಮ್ ಫೇಮ್ ಇರುವ ನಟಿ. ಇದೇ ನಟಿ ಈಗ ಸುದ್ದಿಯೊಂದರಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಯಾವುದೋ ಹೊಸ ಸಿನೆಮಾ ಬರ್ತಿದೆ ಅಂತ ಅನ್ಕೊಳ್ಳಬೇಡಿ. ಅಸಲಿಗೆ ಬಂಗಾಲಿ ಚಲನಚಿತ್ರ ನಿರ್ಮಾಣ ಸಂಸ್ಥೆಯೊಂದು ಕಿರುಕುಳ ಕೊಟ್ಟು ಬೆದರಿಕೆ ಹಾಕಿದೆ ಎಂದು ನಟಿ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
ಈ ಬೆಂಗಾಲಿ ನಟಿ ‘ಶಿವಪುರ’ ಚಿತ್ರದಲ್ಲಿ ನಟಿಸುತ್ತಿದ್ದು, ಇದನ್ನು ಅರಿಂದಮ್ ಭಟ್ಟಾಚಾರ್ಯರವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಕಳೆದ ವರ್ಷ ಜುಲೈನಲ್ಲಿ ನಡೆದಿದ್ದು ಮೇ 5ರಂದು ಚಿತ್ರ ಬಿಡುಗಡೆಯಾಗಲಿದೆ. ಇಂಡೋ-ಅಮೆರಿಕಾ ಬ್ಯಾನರ್ ಅಡಿಯಲ್ಲಿ ತಯಾರಾದ ಈ ಚಿತ್ರವನ್ನ ಅಜಂತಾ ಸಿಂಗ್‌ರಾಯ್, ಸಂದೀಪ್ ಸರ್ಕಾರ್ ನಿರ್ಮಿಸುತ್ತಿದ್ದಾರ
ಈ ನಡುವೆ ನಟಿಯ ಕೆಲ ಆಕ್ಷೇಪಾರ್ಹ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಅವುಗಳನ್ನ ಉದ್ದೇಶಪೂರಕವಾಗಿಯೇ ವೈರಲ್ ಮಾಡಲಾಗುತ್ತಿದೆ ಎಂದು ನಟಿ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಹೇಳಿದ್ದಾರೆ. ಈ ವಿಷಯದ ಕುರಿತು ಐಎಂಪಿಎ (ಈಸ್ಟರ್ನ್ ಇಂಡಿಯಾ ಮೋಷನ್ ಪಿಕ್ಚರ್ಸ್ ಅಸೋಸಿಯೇಷನ್) ಗಮನಕ್ಕೂ ತರಲಾಗಿದೆ.
ಪ್ರೊಡಕ್ಷನ್ ಕಂಪನಿಯ ಪರ ವಕೀಲ ಶೌವಿಕ್ ಬಸು ಠಾಕೂರ್, “ನನಗೂ ಸಹ ಮಾಧ್ಯಮಗಳಿಂದ ಈ ಸುದ್ದಿ ಗಮನಕ್ಕೆ ಬಂದಿದೆ. ಇದರಲ್ಲಿ ನಿರ್ಮಾಪಕರ ಕೈವಾಡ ಇರಲು ಸಾಧ್ಯವೇ ಇಲ್ಲ. ಇದು ಕಲ್ಪಿಸಿಕೊಂಡಿರುವ ಕಥೆಯಂತಿದೆ. ಈ ಬಗ್ಗೆ ನಾನು ನಟಿಯೊಂದಿಗೆ ಮಾತನಾಡಲು ಬಯಸುತ್ತೇನೆ. ತನ್ನ ಕಕ್ಷಿದಾರರು ಯಾವುದೇ ತಪ್ಪನ್ನ ಮಾಡಿಲ್ಲ” ಎಂದು ಹೇಳಿದ್ದಾರೆ.
ಇದು ಪ್ರಚಾರದ ಗಿಮಿಕ್ ಆಗಿದ್ದು, ಸಿನಿಮಾ ಹಿಟ್ ಆಗಲಿ ಎಂದೇ ಈ ರೀತಿ ನಾಟಕ ಆಡಲಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಿರ್ದೇಶಕರು ಮಾತ್ರ “ಇದು ಸುಳ್ಳು, ನನಗೆ ಯಾವುದೇ ನೆಗೆಟಿವ್ ಪುಚಾರದಲ್ಲಿ ನಂಬಿಕೆ ಇಲ್ಲ’ ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ವೈರಲ್ ಆಗಿರುವ ಫೋಟೋಗಳನ್ನ ಡಿಲೀಟ್ ಮಾಡಲಾಗಿದೆ.