ನವದೆಹಲಿ: ಬಾಂಗ್ಲಾದೇಶದ ನಾಯಕಿ ಶೇಖ್ ಹಸೀನಾ ಅವರು ಸೋಮವಾರ ಸಂಜೆ ದೆಹಲಿಯಿಂದ ಸುಮಾರು 30 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುಪಡೆ ನೆಲೆಗೆ ಬಂದಿಳಿದ್ದಾರೆ. ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯಾಗಿದ್ದಾರೆ.
ಬಾಂಗ್ಲಾದೇಶದ ಪರಿಸ್ಥಿತಿಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದಾರೆ. ಮೋದಿ ಅವರು ಹಸೀನಾ ಅವರನ್ನು ಭೇಟಿ ಮಾಡುತ್ತಾರೆಯೇ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.
ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಸಂಸತ್ತಿನ ಆವರಣದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಬಾಂಗ್ಲಾದೇಶದ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ್ದಾರೆ, ಸಂಸತ್ತಿನ ಹೊರಭಾಗದಲ್ಲಿ ಇಬ್ಬರೂ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ.
76 ವರ್ಷ ವಯಸ್ಸಿನ ಐದು ಬಾರಿ ಪ್ರಧಾನ ಮಂತ್ರಿಯಾಗಿರುವ ಶೇಖ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸರ್ಕಾರಿ ಉದ್ಯೋಗಗಳಿಗೆ ಕೋಟಾ ವಿಚಾರವಾಗಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಬಾಂಗ್ಲಾ ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಬೇಕಾಯಿತು.
ಶೇಖ್ ಹಸೀನಾ ಲಂಡನ್ ಗೆ ತೆರಳುವ ನಿರೀಕ್ಷೆ ಇದೆ. ಹಸೀನಾ ಅವರ ವಿಮಾನ ಲಂಡನ್ ಗೆ ಹಾರಲು ಇಂಧನ ತುಂಬಿಸಲಾಗುತ್ತಿದೆ. ಅಲ್ಲಿ ಅವರು ರಾಜಕೀಯ ಆಶ್ರಯ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.