ಲಾಲು ಪ್ರಸಾದ್ ಯಾದವ್ ಅವರಿಗೆ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ಅಪ್ಪನ ಪ್ರಾಣ ಉಳಿಸಿದ್ದಾರೆ ಅವರ ಪುತ್ರಿ ರೋಹಿಣಿ ಆಚಾರ್ಯ. ಈ ಘಟನೆಯ ನಂತರ ರೋಹಿಣಿ ಅವರ ಕೆಲವು ಕುತೂಹಲದ ಘಟನೆಗಳು ವೈರಲ್ ಆಗುತ್ತಿವೆ.
1979ರಂದು ರೋಹಿಣಿ ಜನಿಸಿದ್ದಾರೆ. ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಬಿಹಾರದ ಖ್ಯಾತ ಸ್ತ್ರೀರೋಗತಜ್ಞ ಮತ್ತು ಪ್ರಸೂತಿ ತಜ್ಞ ಡಾ. ಆಚಾರ್ಯ ಅವರು ರೋಹಿಣಿ ಅವರ ತಾಯಿಗೆ ಶಸ್ತ್ರಚಿಕಿತ್ಸೆ ಮೂಲಕ ಡೆಲವರಿ ಮಾಡಿಸಿದ್ದರು. ಆ ಸಂದರ್ಭದಲ್ಲಿ ಹಣವನ್ನು ಪಡೆಯಲು ನಿರಾಕರಿಸಿದ್ದ ವೈದ್ಯರು, ಮಗಳ ಉಪನಾಮವಾಗಿ ತಮ್ಮ ಉಪನಾಮವಾದ ಆಚಾರ್ಯವನ್ನು ಇಡುವಂತೆ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಮಗಳು ರೋಹಿಣಿ ಆಚಾರ್ಯ ಎಂದೇ ಪ್ರಸಿದ್ಧರಾದರು. ಲಾಲು ಅವರ ಕಾಲೇಜು ಸ್ನೇಹಿತರ ಮಗ ಸಾಫ್ಟ್‌ವೇರ್ ಇಂಜಿನಿಯರ್ ಶಂಶೇರ್ ಸಿಂಗ್ ಅವರನ್ನು ರೋಹಿಣಿ 2002 ರಲ್ಲಿ ಮದುವೆಯಾದರು. ಅವರು ಸದ್ಯ ಪತಿ, ಇಬ್ಬರು ಪುತ್ರರು ಮತ್ತು ಮಗಳೊಂದಿಗೆ ಸಿಂಗಾಪುರದಲ್ಲಿ ವಾಸಿಸುತ್ತಿದ್ದಾರೆ.
2021 ರಲ್ಲಿ, ಆಕೆಯ ತಂದೆ ಅನಾರೋಗ್ಯಕ್ಕೆ ಒಳಗಾದಾಗ, ರೋಹಿಣಿ ಅವರು ತಂದೆಯ ಆರೋಗ್ಯಕ್ಕಾಗಿ ಪ್ರಾರ್ಥಿಸಲು ರಂಜಾನ್ ಸಮಯದಲ್ಲಿ ‘ರೋಜಾ’ ಮಾಡುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿ ಸುದ್ದಿಯಾಗಿದ್ದರು.