ನಾನು ಮೂತ್ರ ವಿಸರ್ಜನೆ ಮಾಡಿಲ್ಲ, ಮಹಿಳೆಯೇ ತನ್ನ ಸೀಟಿನ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂದು ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿತ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ಸಹ-ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿಯಾಗಿರುವ ಶಂಕರ್ ಮಿಶ್ರಾ ಅವರು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹೇಳಿಕೆ ನೀಡಿ, ನಾನು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಲಿಲ್ಲ. ಅವರು ಸ್ವತಃ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಮಿಶ್ರಾ ಅವರ ವಕೀಲರು ವಯಸ್ಸಾದ ಮಹಿಳೆ ತನ್ನ ಆರೋಗ್ಯದ ಕಾರಣದಿಂದ ಸ್ವತಃ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಪ್ರತಿಪಾದಿಸಿದರು. ಮಹಿಳೆಯು 30 ವರ್ಷಗಳಿಂದ ಭರತನಾಟ್ಯ ನರ್ತಕಿಯಾಗಿದ್ದು, ಅವರಿಗೆ ಮೂತ್ರದ ನಿಯಂತ್ರಣ ಇಲ್ಲ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಚಾರಣೆಗಾಗಿ ತನ್ನ ಕಸ್ಟಡಿಗೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಾಲಯ ನೀಡಿದ್ದ ನೋಟಿಸ್ ಗೆ ಮಿಶ್ರಾ ಅವರ ಉತ್ತರದ ವೇಳೆ ಈ ವಿಷಯ ತಿಳಿಸಲಾಗಿದೆ. ಕಳೆದ ವಾರ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಬುಧವಾರ ತಿರಸ್ಕರಿಸಲಾಗಿತ್ತು.
ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಸಹ-ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಮಿಶ್ರಾ ಮೇಲಿದೆ. ಈ ಸಂಬಂಧ ಲುಕ್ ಔಟ್ ಸುತ್ತೋಲೆ ಹೊರಡಿಸಿದ ನಂತರ ಅವರನ್ನು ಶುಕ್ರವಾರ ಬೆಂಗಳೂರಿನಲ್ಲಿ ಬಂಧಿಸಲಾಯಿತು. ವಿಷಯ ಬೆಳಕಿಗೆ ಬಂದಾಗಿನಿಂದ ಮಿಶ್ರಾ ತಲೆಮರೆಸಿಕೊಂಡಿದ್ದರು.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(DGCA) ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾಕ್ಕೆ ಶೋಕಾಸ್ ನೋಟಿಸ್ ನೀಡಿತ್ತು.