
ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹೆಸರು ಮಾಡಿರುವ, ಭಾರತವನ್ನು ಕ್ರೀಡಾ ಶಕ್ತಿ ಕೇಂದ್ರವನ್ನಾಗಿ ಮಾರ್ಪಡಿಸಲು ಸೈನಾ ನೆಹ್ವಾಲ್ ಅವರು ಅತ್ಯುತ್ತಮ ಕೊಡುಗೆಗಳನ್ನ ನೀಡಿದ್ದಾರೆ. ಸೈನಾ ಸಾಧನೆಗೆ ಭಾರತ ಹೆಮ್ಮೆಪಡುತ್ತದೆ. ಸೈನಾ ಒಲಂಪಿಕ್ ಪದಕ ವಿಜೇತೆ ಮಾತ್ರವಲ್ಲ, ಭಾರತದ ದೇಶದ ದೃಢಮನಸ್ಸಿನ ದೇಶಭಕ್ತರಾಗಿದ್ದಾರೆ. ಇಂತಾ ಮಹಾನ್ ವ್ಯಕ್ತಿ ಹಾಗೂ ವ್ಯಕ್ತಿತ್ವದ ಬಗ್ಗೆ ಚೀಪ್ ಕಾಮೆಂಟ್ ಮಾಡುವವರು ಅವಿವೇಕಿಗಳು ಎಂದು ಸಚಿವ ಕಿರಣ್ ಟ್ವೀಟ್ ಮಾಡಿದ್ದಾರೆ.
ಜನವರಿ 5 ರಂದು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯ ಲೋಪ ಕುರಿತು ಸೈನಾ ನೆಹ್ವಾಲ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಸಿದ್ಧಾರ್ಥ್ ಮಾಡಿದ್ದ ಟ್ವೀಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈ ಟ್ವೀಟ್ ನಿಂದ ತಮಿಳು ನಟನ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ಯವಾಗುತ್ತಿವೆ. ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಗಾಯಕಿ ಚಿನ್ಮಯಿ ಶ್ರೀಪಾದ ಸೇರಿದಂತೆ ಹಲವರು ಸಿದ್ಧಾರ್ಥ್ ಟ್ವೀಟ್ ಅನ್ನು ವಿರೋಧಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಕೂಡ ಈ ಟ್ವೀಟ್‌ಗೆ ಸಂಬಂಧಿಸಿದಂತೆ ನಟನಿಗೆ ನೋಟಿಸ್ ಕಳುಹಿಸಿದೆ. ಸೈನಾ ನೆಹ್ವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ನಟನಾಗಿ ಸಿದ್ಧಾರ್ಥ್ ಅವರನ್ನು ಇಷ್ಟಪಟ್ಟಿದ್ದೆ. ಆದರೆ ಅವರಿಂದ ಇಂಥದ್ದನ್ನು ನಿರೀಕ್ಷಿಸಿರಲಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿಸಲು ಅವರು ಉತ್ತಮವಾದ ಪದಗಳನ್ನು ಬಳಸಬಹುದಿತ್ತು ಎಂದು ಹೇಳಿದ್ದಾರೆ.