ಆರ್ಥಿಕ ವಂಚನೆ ಆರೋಪ ಎದುರಿಸುತ್ತಿರುವ ಮೇಹುಲ್ ಚೋಕ್ಸಿ ತನ್ನನ್ನು ಅಪಹರಿಸಿ ಚೆನ್ನಾಗಿ ಥಳಿಸಿದ್ದಾರೆ ಎಂದು ಡೊಮಿನಿಕಾ ದೇಶದ ವಕೀಲರ ಮೂಲಕ ಪೊಲೀಸ್ ದೂರು ಕೊಟ್ಟಿದ್ದಾನೆ. ಸದ್ಯಕ್ಕೆ ಡೊಮಿನಿಕಾದ ಜೈಲಿನಲ್ಲಿರುವ ಚೋಕ್ಸಿ, ಅಂಟಿಗುವಾ ಪೊಲೀಸರು ಎಂದು ಹೇಳಿಕೊಂಡು ಬಂದ ಮಂದಿ ಅಪಹರಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.
ಇದೇ ವೇಳೆ ಬಾರ್ಬರಾ ಜಬಾರಿಕಾ ಎಂಬ ನಿಗೂಢ ಮಹಿಳೆಯೊಬ್ಬಳು ತನ್ನನ್ನು ಬಲೆಗೆ ಬೀಳಿಸಿ ಅಪಹರಣಕಾರರಿಗೆ ನೆರವಾಗಿದ್ದಾಳೆ ಎಂದು ಚೋಕ್ಸಿ ಹೇಳಿಕೊಂಡಿದ್ದಾನೆ.
“ಭಾರತದ ದೊಡ್ಡ ರಾಜಕಾರಣಿಯೊಬ್ಬರಿಗೆ ಸಂದರ್ಶನ ಕೊಡಲೆಂದು ಹೇಳಿ ನನ್ನನ್ನು ಕಿಡ್ನಾಪ್ ಮಾಡಲಾಗಿತ್ತು. ನನ್ನ ಪೌರತ್ವದ ವಿಚಾರವನ್ನು ಡೊಮಿನಿಕಾದಲ್ಲಿ ಇತ್ಯರ್ಥ ಮಾಡಲಿದ್ದು, ಭಾರತಕ್ಕೆ ಗಡೀಪಾರು ಮಾಡುವುದಾಗಿ ಅವರು ಹೇಳಿದ್ದರು” ಎಂದು ಐದು ಪುಟಗಳ ತನ್ನ ದೂರಿನಲ್ಲಿ ಚೋಕ್ಸಿ ಹೇಳಿಕೊಂಡಿದ್ದಾನೆ.
ಆಂಟಿಗಾ ಮತ್ತು ಬಾರ್ಬುಡಾದಿಂದ ಮೇ 23ರಿಂದ ಚೋಕ್ಸಿ ಕಾಣೆಯಾಗಿದ್ದಾನೆ ಎಂದು ಆತನ ಕುಟುಂಬ ಹೇಳಿರುವುದಾಗಿ ವರದಿ ಮಾಡಲಾಗಿತ್ತು. ತನ್ನ ಗರ್ಲ್‌ಫ್ರೆಂಡ್ ಜೊತೆ ಪಕ್ಕದ ದ್ವೀಪರಾಷ್ಟ್ರಕ್ಕೆ ರೊಮ್ಯಾಂಟಿಕ್ ಪ್ರವಾಸದಲ್ಲಿದ್ದ ವೇಳೆ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳಿವೆ.
ಚೋಕ್ಸಿ ಹಾಗೂ ಆತನ ಸಹೋದರ ಸಂಬಂಧಿ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂ.ಗಳಷ್ಟು ವಂಚನೆಯೆಸಗಿದ್ದು, 2018ರಿಂದ ಭಾರತದಿಂದ ನಾಪತ್ತೆಯಾಗಿದ್ದಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಅಧಿಕಾರಿಗಳಿಗೆ ಲಂಚದ ರುಚಿ ತೋರಿದ ಈ ಇಬ್ಬರು ಅವರಿಂದ ಅನುಮತಿ ಪತ್ರ ಪಡೆದು ಭಾರೀ ಮೊತ್ತದ ಸಾಲವನ್ನು ಪಡೆದಿದ್ದಾರೆ. ಈ ಸಾಲವನ್ನು ಇದುವರೆಗೂ ಇವರು ಮರುಪಾವತಿ ಮಾಡಿಲ್ಲ.