ಉತ್ತರ ಪ್ರದೇಶದ ನೋಯ್ಡಾದ ವಿವಿ ಕ್ಯಾಂಪಸ್ನಲ್ಲಿ ಮೂರನೇ ವರ್ಷದ ಸಮಾಜಶಾಸ್ತ್ರ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತೆಯೊಂದಿಗೆ ಜಗಳವಾಡಿದ ನಂತರ ಆಕೆಗೆ ಗುಂಡಿಟ್ಟು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ.
ಶಿವ ನಾಡರ್ ವಿಶ್ವವಿದ್ಯಾನಿಲಯದಲ್ಲಿ ಮೂರನೇ ವರ್ಷದ ವಿದ್ಯಾರ್ಥಿ ಗುರುವಾರ (ಮೇ 18) ಮಧ್ಯಾಹ್ನ ತನ್ನ ಗೆಳತಿಗೆ ಕ್ಯಾಂಪಸ್ನಲ್ಲಿ ಪಾಯಿಂಟ್-ಬ್ಲಾಂಕ್ ರೇಂಜ್ನಿಂದ ಗುಂಡು ಹಾರಿಸಿ ನಂತರ ತನ್ನ ಹಾಸ್ಟೆಲ್ ಕೋಣೆಯಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದ.
ಅನುಜ್ ಸಿಂಗ್ ಎಂಬ ವಿದ್ಯಾರ್ಥಿ ಸ್ನೇಹಾ ಚೌರಾಸಿಯಾ ಅವರನ್ನು ಗುಂಡಿಕ್ಕಿ ಕೊಂದಿದ್ದ. ಇದಕ್ಕೂ ಮೊದಲು ತನ್ನ ಅಪರಾಧದ ಕಾರಣವನ್ನು ಸಮರ್ಥಿಸುವ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ವಿದ್ಯಾರ್ಥಿ ಮೊದಲು ಸ್ನೇಹಾಳನ್ನು ತನ್ನ ಜೀವನದ ಬೆಳಕು ಎಂದು ಕರೆದಿದ್ದು ಆನಂತರ ಅವಳಿಂದ ತನ್ನ ಜೀವನ ಕತ್ತಲಾಯಿತೆಂದಿದ್ದಾನೆ.
ಅನೂಜ್ ಗೂಗಲ್ ಡ್ರೈವ್ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿ ಅದನ್ನು “ನನ್ನ ಆತ್ಮಹತ್ಯೆ ಟಿಪ್ಪಣಿ” ಎಂದು ಹೆಸರಿಸಿ ಅದನ್ನು ತಮ್ಮ ಸ್ನೇಹಿತರು ಮತ್ತು ವಿಶ್ವವಿದ್ಯಾಲಯದ ಗುಂಪಿನೊಂದಿಗೆ ಹಂಚಿಕೊಂಡಿದ್ದಾನೆ. ಗುರುವಾರ ಮಧ್ಯಾಹ್ನ 1.18 ಗಂಟೆಗೆ ಅನೂಜ್ ತಪ್ಪೊಪ್ಪಿಗೆಯ ವೀಡಿಯೊವನ್ನು ತನ್ನ ವಿಶ್ವವಿದ್ಯಾಲಯದ ಗುಂಪಿಗೆ ಮೇಲ್ ಮಾಡಿದ 10 ನಿಮಿಷಗಳ ನಂತರ ಗುಂಡಿನ ದಾಳಿ ನಡೆದಿದೆ .
ಮೇಲ್ ಕಳುಹಿಸಿದ ತಕ್ಷಣ, ಅನೂಜ್ ದಾದ್ರಿಯಲ್ಲಿರುವ ವಿಶ್ವವಿದ್ಯಾನಿಲಯದ ವಿಶಾಲವಾದ ಕ್ಯಾಂಪಸ್ನಲ್ಲಿರುವ ಹಾಸ್ಟೆಲ್ಗಳ ಪಕ್ಕದಲ್ಲಿರುವ ಡೈನಿಂಗ್ ಹಾಲ್ 2 ರ ಹೊರಗೆ ಸ್ನೇಹಾಳನ್ನು ಭೇಟಿಯಾಗಿದ್ದಾನೆ. ಡೈನಿಂಗ್ ಹಾಲ್ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಘಟನೆಯ ದೃಶ್ಯಾವಳಿಗಳು ಸೆರೆಯಾಗಿವೆ. ಅವನು ಸ್ನೇಹಾಳನ್ನು ಮೊದಲು ತಬ್ಬಿಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಅವನು ಅವಳ ಮೇಲೆ ಎರಡು ಬಾರಿ ಗುಂಡು ಹಾರಿಸುತ್ತಾನೆ. ಅವಳು ಕೆಳಗೆ ಬಿದ್ದ ನಂತರ ಹೊರಡುವ ಮೊದಲು ಪರೀಕ್ಷಿಸಲು ಒಮ್ಮೆ ಕೆಳಗೆ ಬಾಗಿ ನೋಡುತ್ತಾನೆ.