ಕೊಪ್ಪಳ: ರಾಜ್ಯ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿರುವ ಬೆನ್ನಲ್ಲೇ ವಿದ್ಯುತ್ ನಿಗಮಗಳು ಮಾಡುತ್ತಿರುವ ಎಡವಟ್ಟಿಗೆ ಜನರು ದಂಗು ಬಡಿಯುವಂತಾಗಿದೆ. ಕೊಪ್ಪಳದಲ್ಲಿ ಜೆಸ್ಕಾಂ ಸಿಬ್ಬಂದಿ ನೀಡಿದ ವಿದ್ಯುತ್ ಬಿಲ್ ನೋಡಿ ಅಜ್ಜಿಯೊಬ್ಬರು ಆಘಾತಗೊಂಡಿದ್ದಾರೆ.
ಕೊಪ್ಪಳದ ಭಾಗ್ಯನಗರದ ಶೀಟ್ ಮನೆಗೆ ಜೆಸ್ಕಾಂ ಸಿಬ್ಬಂದಿಗಳು ಬರೋಬ್ಬರಿ 1 ಲಕ್ಷ ರೂಪಾಯಿ ಬಿಲ್ ನೀಡಿ ಹೋಗಿದ್ದಾರೆ. ಮನೆಯಲ್ಲಿದ್ದ ಅಜ್ಜಿ ಗಿರಿಯಮ್ಮ ಬಿಲ್ ನೋಡಿ ಕಂಗಾಲಾಗಿದ್ದಾರೆ.
ಶೀಟ್ ಮನೆ, ಎರಡೇ ಎರಡು ಲೈಟ್ ಇರುವುದು. ಯಾವುದೇ ಎಲೆಕ್ಟ್ರಿಕ್ ವಸ್ತುಗಳು, ಫ್ರಿಜ್, ವಾಷಿಂಗ್ ಮಷಿನ್ ಕೂಡ ಮನೆಯಲ್ಲಿ ಇಲ್ಲ ಆದರೂ ಲಕ್ಷಾಂತರ ರೂಪಾಯಿ ಬಿಲ್ ನೀಡಿ ಹೋಗಿದ್ದಾರೆ ಎಂದು ಅಜ್ಜಿ ಅಳಲು ತೋಡಿಕೊಂಡಿದ್ದಾರೆ.
ಗಿರಿಜಮ್ಮ ಎಂಬುವವರ ಮನೆಗೆ ಜೆಸ್ಕಾಂ ಸಿಬ್ಬಂದಿ ಬರೋಬ್ಬರಿ 1,03,315 ರೂಪಾಯಿ ಬಿಲ್ ನೀಡಿದ್ದಾರೆ. ಈವರೆಗೆ 70-80 ರೂ. ಬಿಲ್ ನೀಡುತ್ತಿದ್ದ ಸಿಬ್ಬಂದಿ ಈಗ ಹೊಸ ಮೀಟರ್ ಅಳವಡಿಕೆ ಬಳಿಕ ಲಕ್ಷ ರೂಪಾಯಿ ಬಿಲ್ ನೀಡಿದ್ದಾರೆ ಎಂದು ಅಜ್ಜಿ ಕಣ್ಣೀರಿಟ್ಟಿದ್ದಾರೆ.