ಮದುವೆ ಅನ್ನೋದು ಜೀವನದಲ್ಲಿ ಒಂದು ಬಾರಿ ಬರುವಂತಹ ಅದ್ಭುತ ಘಳಿಗೆ. ಆದರೆ ಪಾಕಿಸ್ತಾನಿ ವ್ಯಕ್ತಿಯೊಬ್ಬ ಆ ಘಳಿಗೆಯನ್ನ ಒಂದಲ್ಲ ಎರಡಲ್ಲ ಐದು ಬಾರಿ ಬರುವಂತೆ ಮಾಡಿದ್ಧಾನೆ. 11 ಮಕ್ಕಳ ತಂದೆಯಾಗಿರುವ ಶೌಕತ್ ಕಳೆದ ವರ್ಷವೇ 5ನೇ ಬಾರಿ ಮದುವೆಯಾಗಿದ್ದಾರೆ.
ಈ ಹಿಂದಿನ 4 ಪತ್ನಿಯರಿಂದ 10 ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ, 40 ಮೊಮ್ಮಕ್ಕಳು ಮತ್ತು 11 ಅಳಿಯಂದಿರು ಇದ್ದಾರೆ. ಒಟ್ಟಾರೆ, ಇವರ ಕುಟುಂಬದಲ್ಲಿ ಒಟ್ಟು 62 ಸದಸ್ಯರಿದ್ದಾರೆ ಎಂದು ತಿಳಿದುಬಂದಿದೆ. ಯೂಟ್ಯೂಬರ್ ಯಾಸಿರ್ ಶಮಿ ಅವರೊಂದಿಗೆ 56 ವರ್ಷದ ಶೌಕತ್ ರ ಮಾರ್ಚ್ 2021 ರ ಸಂದರ್ಶನವು ಇತ್ತೀಚೆಗೆ ವೈರಲ್ ಆದ ನಂತರ ಅವರ ಜೀವನದ ಕಥೆ ಬೆಳಕಿಗೆ ಬಂದಿದೆ.
5ನೇ ಮದುವೆಯಾಗುವ ಮೊದಲೇ, ಆತನ 8 ಹೆಣ್ಣು ಮಕ್ಕಳು ಹಾಗೂ ಏಕೈಕ ಪುತ್ರನಿಗೆ ಮದುವೆಯಾಗಿದೆ. ಇನ್ನು, ತನ್ನ ಇಬ್ಬರು ಅವಿವಾಹಿತ ಹೆಣ್ಣು ಮಕ್ಕಳು ತನಗೆ ಐದನೇ ಬಾರಿ ಹಾಗೂ ಕೊನೆಯ ಬಾರಿ ಮದುವೆಯಾಗಲು ಒತ್ತಾಯ ಮಾಡಿದರು ಎಂದು ಅವರು ಪಾಕ್ ಮಾಧ್ಯಮಕ್ಕೆ ವಿವರಿಸಿದರು. ಅಲ್ಲದೆ, ಆ ಇಬ್ಬರು ಹೆಣ್ಣು ಮಕ್ಕಳು ಮದುವೆಯಾದ ದಿನವೇ ಅವರ ತಂದೆಯ 5ನೇ ಮದುವೆಯೂ ಆಗಿದೆ.
ಈ ಮಧ್ಯೆ, ಈ ಮದುವೆಯ ಬಗ್ಗೆ ನಿಮಗೆ ಏನನಿಸುತ್ತದೆ ಎಂದು ಆತನ 5ನೇ ಪತ್ನಿಗೆ ಕೇಳಿದ್ದಕ್ಕೆ, ಅವರು ತಾನು ಸಂತೋಷವಾಗಿದ್ದೇನೆ ಮತ್ತು ಸಾಮಾನ್ಯಕ್ಕಿಂತ ದೊಡ್ಡ ಕುಟುಂಬದೊಂದಿಗೆ ಇದ್ದೇನೆ ಎಂದು ಹೇಳಿದ್ದಾರೆ. ಹಾಗೆ, ಅವರ ಮನೆಯಲ್ಲಿ ಇಬ್ಬರು 2 ರೋಟಿ ತಿಂದರೂ ಒಂದು ಹೊತ್ತಿಗೆ 124 ರೋಟಿ ಅಥವಾ 124 ಚಪಾತಿ ಮಾಡಬೇಕು ಎಂದೂ ಅವರು ಹೇಳಿಕೊಂಡರು.
ಇತ್ತೀಚೆಗೆ, 63 ವರ್ಷ ವಯಸ್ಸಿನ ಸೌದಿ ಅರೇಬಿಯಾದ ವ್ಯಕ್ತಿಯೊಬ್ಬರು 53 ಬಾರಿ ಮದುವೆಯಾಗಿರೋದು ಸುದ್ದಿಯಾಗಿತ್ತು. ಅದರ ನಂತರ ಈಗ ಶೌಕತ್ 5ನೇ ಬಾರಿ ಮದುವೆಯಾಗಿರೋದು ಸುದ್ದಿಯಾಗಿದೆ.