ಮುಂಬೈ: ಕಳೆದ ವಾರಷ್ಟೇ ಪುತ್ರಿಯ ಮದುವೆ ಮಾಡಿದ್ದ ಖ್ಯಾತ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಅವರನ್ನು ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶತ್ರುಘ್ನ ಸಿನ್ಹಾ ಅವರ ಪುತ್ರ ಲವ್ ಸಿನ್ಹಾ ಅವರು ಸುದ್ದಿಯನ್ನು ಖಚಿತಪಡಿಸಿದ್ದಾರೆ. ಶತ್ರುಘ್ನ ಸಿನ್ಹಾ ಅವರ ಸ್ಥಿತಿಯ ಬಗ್ಗೆ ಕೇಳಿದಾಗ, ಕಳೆದ ಎರಡು ದಿನಗಳಿಂದ ತಂದೆಗೆ ವೈರಲ್ ಜ್ವರ ಮತ್ತು ದೌರ್ಬಲ್ಯ ಇತ್ತು. ಆದ್ದರಿಂದ ನಾವು ಅವರನ್ನು ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಹೇಳಿದ್ದಾರೆ.
ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಅವರ ವಿವಾಹದ ನಂತರ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ. ಕಳೆದ ಭಾನುವಾರ ಬಾಂದ್ರಾ ಅಪಾರ್ಟ್‌ಮೆಂಟ್‌ನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಸೋನಾಕ್ಷಿ ತಮ್ಮ ವಿವಾಹವನ್ನು ನೋಂದಾಯಿಸಿಕೊಂಡಿದ್ದಾರೆ. ನೋಂದಾವಣೆ ಸಮಾರಂಭದಲ್ಲಿ ಹಾಗೂ ಆರತಕ್ಷತೆ ಸಮಾರಂಭದಲ್ಲಿ ಶತ್ರುಘ್ನ ಸಿನ್ಹಾ ಮತ್ತು ಪತ್ನಿ ಪೂನಂ ಸಿನ್ಹಾ ಉಪಸ್ಥಿತರಿದ್ದರು.