ಬೆಳಗಾವಿ: ದೇವಸ್ಥಾನಗಳ ಅನುದಾನ ಬಿಡುಗಡೆಗೆ ರಾಜ್ಯ ಸರ್ಕಾರ ತಡೆ ನೀಡಿರುವುದು ಖಂಡನೀಯ ತಕ್ಷಣ ಈ ಆದೇಶವನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಮುಜರಾಯಿ ಖಾತೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಬಹಳಷ್ಟು ಮಹತ್ವವಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವಸ್ಥಾನ, ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದೆವು. ಆದರೆ ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ 2ನೇ ಕಂತು ಬಿಡುಗಡೆಯಾಗಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ದೇವಸ್ಥಾನಗಳ ಅನುದಾನಕ್ಕೆ ತಡೆ ನೀಡಿರುವುದು ಶೋಭೆಯಲ್ಲ ಎಂದು ಕಿಡಿಕಾರಿದರು.
ದೇವಸ್ಥಾನ ವಿಚರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವುದು ಸರ್ಕಾರ ಮತ್ತು ಸಚಿವರ ಜವಾಬ್ದಾರಿ. ತಕ್ಷಣ ಸರ್ಕಾರ ತಡೆ ಆದೇಶವನ್ನು ಹಿಂಪಡೆಯಬೇಕು. ದೇವಾಲಯಗಳ ಜೀರ್ಣೋದ್ಧಾರ ಮಾಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.