ಕೊರೋನಾ ಮಹಾಮಾರಿ ಕಡಿಮೆಯಾಗಲಿ ಎಂದು ಹರಕೆ ಹೊತ್ತಿದ್ದ ವಯೋವೃದ್ಧ ತಾಯಿಯೊಬ್ಬರು ತೆಲಂಗಾಣದ ಜಹೀರಾಬಾದ ತಾಲೂಕಿನ ಧನಶ್ರೀ ಗ್ರಾಮದಿಂದ ಉರುಳು ಸೇವೆ ಆರಂಭಿಸಿದ್ದು, ಈಗ ಬೀದರ್ ಗೆ ಆಗಮಿಸಿದ್ದಾರೆ. ಶಶಿಕಲಾ ಮಾತಾಜಿ ಎಂದೇ ಹೆಸರಾಗಿರುವ ಇವರು ಕಲಬುರಗಿ ಜಿಲ್ಲೆಯಲ್ಲಿರುವ ಭಾಗ್ಯವಂತಿ ದೇಗುಲದವರೆಗೆ ಉರುಳು ಸೇವೆ ಮಾಡಲಿದ್ದಾರೆ.
ಕೊರೊನಾ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶಶಿಕಲಾ ಮಾತಾಜಿಯವರು ಧನಶ್ರೀ ಗ್ರಾಮದಿಂದ ಉರುಳು ಸೇವೆ ಮಾಡಿಕೊಂಡು ಭಾಗ್ಯವಂತಿ ದೇವಿಗೆ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದರು. ಈ ಹರಕೆ ಫಲಿಸಿದ ಹಿನ್ನೆಲೆಯಲ್ಲಿ ಈಗ ಉರುಳು ಸೇವೆ ಮಾಡುತ್ತಿದ್ದಾರೆ.
ಶಶಿಕಲಾ ಮಾತಾಜಿ ಅವರಿಗೆ ಕರ್ನಾಟಕ ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅಪಾರ ಭಕ್ತರಿದ್ದು, ಉರುಳು ಸೇವೆ ಮಾಡಿಕೊಂಡು ಬೀದರ್ ಗೆ ಬಂದ ವೇಳೆ ಅವರ ದರ್ಶನಕ್ಕಾಗಿ ಮುಗಿಬಿದ್ದಿದ್ದಾರೆ. ಈ ಹಿಂದೆಯೂ ಇವರು ಮಹಾರಾಷ್ಟ್ರದ ತುಳಜಾಪುರದ ತುಳಜಾಭವಾನಿ ದೇಗುಲಕ್ಕೆ ಉರುಳು ಸೇವೆ ಮಾಡಿಕೊಂಡು ದೇವಿಯ ದರ್ಶನ ಪಡೆದಿದ್ದರು.