ಬೆಳಗಾವಿ: ಹಿಂದೂಗಳ ಹೊಸ ವರ್ಷದ ಮೊದಲ ದಿನವಾದ ಯುಗಾದಿಯನ್ನು ಧಾರ್ಮಿಕ ದಿನವನ್ನಾಗಿ ಆಚರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು, ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಿಗೆ ಈ ಕುರಿತು ಸೂಚನೆ ನೀಡುವಂತೆ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ವರ್ಷದಲ್ಲಿ ಒಂದು ದಿನವನ್ನು ಆಯಾ ಇಲಾಖೆ ದಿನವಾಗಿ ಆಚರಿಸಲಿದ್ದು, ಈ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಯುಗಾದಿಯಂದು ಧಾರ್ಮಿಕ ದಿನ ಎಂದು ಆಚರಣೆ ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ತಿಳಿಸಲಾಗಿದೆ.
ರಾಜ್ಯದ ಕೆಲವೆಡೆ ಚಾಂದ್ರಮಾನ ಯುಗಾದಿ, ಮತ್ತೆ ಕೆಲವೆಡೆ ಸೌರಮಾನ ಯುಗಾದಿ ಆಚರಿಸಲಾಗುತ್ತದೆ. ಈ ಯುಗಾದಿ ದಿನಗಳಂದು ಇಲಾಖೆ ವ್ಯಾಪ್ತಿಯ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿ ಧಾರ್ಮಿಕ ದಿನ ಆಚರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಧಾರ್ಮಿಕ ದಿನವಾದ ಯುಗಾದಿಯಂದು ದೇವಾಲಯಗಳಲ್ಲಿ ಪಂಚಾಂಗ ಶ್ರವಣ, ಹೊಸ ಸಂವತ್ಸರದ ಶುಭಾಶುಭ ಫಲಗಳು, ಆದಾಯ, ವ್ಯಯ, ನಕ್ಷತ್ರ, ಫಲ ಇತ್ಯಾದಿಗಳನ್ನು ತಿಳಿಸಬೇಕು. ಹರಿಕಥೆ, ವಿಶೇಷ ಪೂಜೆ, ಭಜನೆ, ಬೇವು, ಬೆಲ್ಲ, ಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಲಾಗಿದೆ.