
ಮೊದಲ ದಿನದ ಚಳಿಗಾಲದ ಅಧಿವೇಶನದಲ್ಲಿ ತರೂರ್ ಆರು ಮಂದಿ ಮಹಿಳಾ ಸಂಸದೆಯರ ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಬಳಿಕ ಈ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದರು.
ಈ ಫೋಟೋದಲ್ಲಿ ಸುಪ್ರಿಯಾ ಸುಲೆ, ಪ್ರಣೀತ್ ಕೌರ್, ಡಾ.ಥಮಿಝಿಚಿ ಥಂಗಪಂಡಿಯನ್, ಮಿಮಿ ಚಕ್ರವರ್ತಿ, ನುಸ್ರತ್ ಜಹಾನ್ ಹಾಗೂ ಜ್ಯೋತಿಮಣಿ ಇದ್ದಾರೆ.
ಈ ಫೋಟೋವನ್ನು ಟ್ವೀಟ್ ಮಾಡಿದ ಶಶಿ ತರೂರ್, ಕೆಲಸ ಮಾಡಲು ಲೋಕಸಭೆ ಆಕಷರ್ಣಿಯ ಸ್ಥಳವೆಂದು ಯಾರು ಹೇಳಿದ್ದು..? ಎಂದು ಶೀರ್ಷಿಕೆ ನೀಡಿದ್ದಾರೆ. ಈ ಶೀರ್ಷಿಕೆ ನೋಡಿದ ಟ್ವೀಟಿಗರು ಕೆಂಡಾಮಂಡಲರಾಗಿದ್ದಾರೆ. ಸಂಸದೆಯರನ್ನು ಆಕರ್ಷಣೆ ಎಂದು ಕರೆದ ತರೂರ್ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.
ಅನೇಕ ಟ್ವೀಟಿಗರು, ನಿಮ್ಮ ಕೆಲಸದ ಸ್ಥಳವನ್ನು ಆಕರ್ಷಣೀಯವಾಗಿಸಲು ಮಹಿಳೆಯರೇನು ಅಲಂಕಾರಿಕ ವಸ್ತುಗಳಲ್ಲ ಎಂದು ಟಾಂಗ್ ನೀಡಿದ್ದಾರೆ.
ಆರು ಮಂದಿ ಸಂಸದೆಯರ ಜೊತೆಗೆ ಫೋಟೋ ಶೇರ್ ಮಾಡಿ ಲೋಕಸಭೆಯನ್ನು ಆಕರ್ಷಣೀಯ ಸ್ಥಳವೆಂದು ಹೇಳುವ ಮೂಲಕ ನೀವು ಏನನ್ನು ಸಾಬೀತು ಮಾಡಲು ಹೊರಟಿದ್ದೀರಿ. ನಿಮಗಾಗಿ ಮತ ನೀಡಿದವರ ಪರವಾಗಿ ಕೆಲಸ ಮಾಡಲು ನೀವು ಯಾವ ರೀತಿಯ ಆಕರ್ಷಣೆಯನ್ನು ಬಯಸುತ್ತೀರಿ..? ನಿಮಗೆ ಮಹಿಳೆಯರು ಇಲ್ಲದೇ ರಾಜಕಾರಣ ಆಕರ್ಷಣೀಯ ಎಂದು ಅನಿಸುತ್ತಿಲ್ಲವೆಂದಾದರೆ ನೀವು ರಾಜಕಾರಣ ಬಿಡುವುದು ಲೇಸು ಎಂದು ಟ್ವೀಟಿಗರೊಬ್ಬರು ಕುಟುಕಿದ್ದಾರೆ.
ಸಾಕಷ್ಟು ಋಣಾತ್ಮಕ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಶಶಿ ತರೂರ್ ತಮ್ಮ ಟ್ವೀಟ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ಸೆಲ್ಫಿಯನ್ನು ಟ್ವೀಟ್ ಮಾಡುವ ಉತ್ಸಾಹವನ್ನು ತೋರಿದ್ದು ಮಹಿಳಾ ಸಂಸದೆಯರೇ ಹೊರತು ನಾನಲ್ಲ. ಅಲ್ಲದೇ ಅವರೇ ನನ್ನ ಬಳಿ ಏನಾದರೂ ಹಾಸ್ಯಭರಿತ ಶೀರ್ಷಿಕೆ ನೀಡುವಂತೆ ಕೇಳಿದ್ದರು ಎಂದಿದ್ದಾರೆ.