
ಹೌದು, ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದೆ. ಇದು ಪರಿಸರ, ಆರೋಗ್ಯಕ್ಕೆ ಮಾರಕ ಎಂದು ಗೊತ್ತಿದ್ದರೂ ಬಹುತೇಕ ಎಲ್ಲರೂ ಪ್ಲಾಸ್ಟಿಕ್ ವಸ್ತುಗಳನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದೀಗ ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಮಂದಿ ಪಣತೊಟ್ಟಿದ್ದಾರೆ. ಅದರಲ್ಲಿ ಪ್ಲಾಸ್ಟಿಕ್ ವಸ್ತುಗಳಿಗೆ ಪರ್ಯಾಯವಾಗಿ ಬಳಸಬಹುದಾದಂತಹ ಉಪಯುಕ್ತವಾದ ಪರಿಸರ ಸ್ನೇಹಿ ಕಂಟೈನರ್ ಗಳು ಸೇರಿವೆ.
ಭತ್ತದ ತೌಡಿನಿಂದ ಮಾಡಿದ ಜೈವಿಕ ವಿಘಟನೀಯ ಮತ್ತು ಪರಿಸರ ಸ್ನೇಹಿ ಕಂಟೈನರ್‌ಗಳ ಕುರಿತು ಮಾಹಿತಿಯುಕ್ತ ವಿಡಿಯೋವನ್ನು ಶಶಿ ತರೂರು ರೀ ಟ್ವೀಟ್ ಮಾಡಿದ್ದಾರೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟ್ಟರ್‌ನಲ್ಲಿ ಮೊದಲಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಂಟೈನರ್‌ಗಳ ತಯಾರಿಕೆಯನ್ನು ವಿಡಿಯೋದಲ್ಲಿ ನೋಡಬಹುದು.
ವಿಡಿಯೋದಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಭತ್ತದ ತೌಡಿನಿಂದ ತಯಾರಿಸಿದ ವಿವಿಧ ಉತ್ಪನ್ನಗಳನ್ನು ತೋರಿಸುತ್ತಾರೆ. ನಂತರ ಅವರು ಪ್ಲಾಸ್ಟಿಕ್ ಪಾತ್ರೆಗಳಿಗೆ ಪರಿಸರ ಸ್ನೇಹಿ, ಪರ್ಯಾಯವಾಗಿ ಬಳಸಬಹುದಾದ ಆಹಾರದ ಪಾತ್ರೆಗಳು, ಸಣ್ಣ ಕಪ್ ಗಳು ಮತ್ತು ಗ್ಲಾಸ್ ಗಳನ್ನು ತೋರಿಸುತ್ತಾರೆ. ಇದು ಪರಿಸರ ಸ್ನೇಹಿ ಮಾತ್ರವಲ್ಲದೆ, ಪಾತ್ರೆಗಳಿಂದ ಆಹಾರ ಸೋರಿಕೆಯನ್ನೂ ತಡೆಗಟ್ಟುತ್ತದೆ.
ಇದು ತಮಿಳುನಾಡಿಗೆ ಮಾತ್ರ ಸೀಮಿತವಲ್ಲ ಇಡೀ ದೇಶಕ್ಕೆ ಅನ್ವಯಿಸುತ್ತದೆ. ಪ್ಲಾಸ್ಟಿಕ್‌ಗಳನ್ನು ಮರುಬಳಕೆ ಮಾಡಬಹುದಾದ, ಜೈವಿಕ ವಿಘಟನೀಯ ವಸ್ತುಗಳೊಂದಿಗೆ ಬದಲಾಯಿಸುವಲ್ಲಿ ಅನೇಕ ಆವಿಷ್ಕಾರಗಳಿವೆ. ದಿನನಿತ್ಯದ ಬಳಕೆಗಾಗಿ ಇಂತಹ ಪರಿಸರ ಸ್ನೇಹಿ ಪರ್ಯಾಯಗಳ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ಪ್ರೋತ್ಸಾಹಕಗಳನ್ನು ಒದಗಿಸುವ ಅಗತ್ಯವಿದೆ ಎಂದು ವಿಡಿಯೋ ಸಹಿತ ಕಾಂಗ್ರೆಸ್ ನಾಯಕ ಶಶಿ ತರೂರ್ ಮರುಟ್ವೀಟ್ ಮಾಡಿದ್ದಾರೆ.
ಇದೀಗ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪರಿಸರ ಸ್ನೇಹಿ ಪಾತ್ರೆಗಳ ಕಲ್ಪನೆ ಬಗ್ಗೆ ಅನೇಕರು ಸ್ವಾಗತಿಸಿದ್ದಾರೆ.