
ಬೆಂಗಳೂರು: ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರ ಪತ್ನಿ ಪ್ರತಿಭಾ ಅವರ ಕಾರಿನ ಕಿಟಕಿಯ ಗಾಜು ಒಡೆದು ಕಾರಿನಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚಲಾಗಿದೆ.
ಶರತ್ ಬಚ್ಚೇಗೌಡ ಅವರ ಪರವಾಗಿ ಹೊಸಕೋಟೆಯ ಪಾರ್ವತಿಪುರದಲ್ಲಿ ಬುಧವಾರ ಬೆಳಗ್ಗೆ ಪ್ರತಿಭಾ ಪ್ರಚಾರಕ್ಕೆ ತೆರಳಿದ್ದರು. ಕಾರ್ ನಿಲ್ಲಿಸಿ ಚಾಲಕ ಮತ್ತು ಕಾರ್ಯಕರ್ತರೊಂದಿಗೆ ತಿಂಡಿ ತಿನ್ನಲು ಹೋಗಿ ಬರುವಷ್ಟರಲ್ಲಿ ಕಾರಿನ ಎಡಬದಿಯ ಗಾಜು ಒಡೆದು ಒಂದು ಲಕ್ಷ ರೂಪಾಯಿ ಬೆಲೆಯ ಮೊಬೈಲ್ ಫೋನ್, 20,000 ರೂ. ನಗದು, 40,000 ರೂ. ಬೆಲೆಯ ಪರ್ಸ್, ಎಟಿಎಂ ಕಾರ್ಡ್, ಆಧಾರ್ ಕಾರ್ಡ್ ಕಳವು ಮಾಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಶರತ್ ಬಚ್ಚೇಗೌಡ ಪತ್ನಿಯ ಸಾಮಾಜಿಕ ಕಾರ್ಯ ಹಾಗೂ ಪ್ರಚಾರದಿಂದ ಕಂಗೆಟ್ಟ ವಿರೋಧಿಗಳು ಬೆದರಿಸುವ ತಂತ್ರವಾಗಿ ಇಂತಹ ಕೃತ್ಯವೆಸಗಿದ್ದಾರೆ ಎಂದು ದೂರಿದ್ದಾರೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.