ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಮಾಡಿದ್ದಾರೆ. ಇದು ಸಿಲ್ಲಿ ಅಟೆಂಪ್ಟ್ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಲಘುವಾಗಿ ಮಾತನಾಡಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶರಣಪ್ರಕಾಶ್ ಪಾಟೀಲ್, ಶಾಂತಿ ಕದಡಲು ಈ ರೀತಿ ಕೆಲಸ ಮಾಡುತ್ತಾರೆ. ಇದಕ್ಕೆಲ್ಲ ನಮ್ಮ ಸರ್ಕಾರ ಸೊಪ್ಪು ಹಾಕಲ್ಲ. ಇಂತಹ ಸಿಲ್ಲಿ ಅಟೆಂಪ್ಟ್ ಗಳಿಂದ ಸರ್ಕಾರ ವಿಚಲಿತವಾಗಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಇಂತಹ ಕೃತ್ಯಕ್ಕೆ ಆಸ್ಪದ ಇಲ್ಲ. ನಮ್ಮ ಸರ್ಕಾರದ ಉದ್ದೇಶ ರಾಜ್ಯದ ಯೋಗಕ್ಷೇಮ, ಶಾಂತಿ-ಸುವ್ಯವಸ್ಥೆ ಮತ್ತು ಅಭಿವೃದ್ಧಿ. ಒಂದೇ ಗುರಿ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಎಫ್ ಎಸ್ ಎಲ್ ವರದಿ ಬಂದರೆ ಕ್ರಮ ಕೈಗೊಳ್ಳುತ್ತೇವೆ. ಕೆಲವರು ವಾಕ್ ಸ್ವಾಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.