alex Certify BIG NEWS: ಸಂಧ್ಯಾಕಾಲದಲ್ಲಿ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳಿಗೆ ಸರ್ಕಾರದಿಂದ ಬಿಗ್ ಶಾಕ್: ಆಸ್ತಿ ವರ್ಗಾವಣೆ ರದ್ದತಿಗೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಂಧ್ಯಾಕಾಲದಲ್ಲಿ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳಿಗೆ ಸರ್ಕಾರದಿಂದ ಬಿಗ್ ಶಾಕ್: ಆಸ್ತಿ ವರ್ಗಾವಣೆ ರದ್ದತಿಗೆ ಸೂಚನೆ

ಬೆಂಗಳೂರು: ಸಂಧ್ಯಾಕಾಲದಲ್ಲಿ ತಂದೆ-ತಾಯಿಯರನ್ನೇ ಅನಾಥರನ್ನಾಗಿ ಮಾಡುತ್ತಿರುವ ಪರಿಪಾಠ ಹೆಚ್ಚಾಗಿದೆ. ಇಂಥ ಅಮಾನವೀಯ ಕೃತ್ಯಗಳನ್ನು ತಡೆಗಟ್ಟಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ.

ಕರ್ನಾಟಕದಲ್ಲಿ ಇತ್ತೀಚೆಗೆ ವೃದ್ಧ ಪೋಷಕರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿರುವ ಉದಾಹರಣೆಗಳು ಹೆಚ್ಚಾಗಿದೆ. ಅದೂ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗೆ ಬಿಟ್ಟು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್) ಒಂದರಲ್ಲೇ, 150 ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ತೊರೆದ ಪ್ರಕರಣಗಳು ವರದಿಯಾಗಿವೆ. ರಾಜ್ಯಾದ್ಯಂತ ಇತರ ವೈದ್ಯಕೀಯ ಸಂಸ್ಥೆಗಳಲ್ಲಿ ಇಂಥ 100 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಈ ವಿಷಯವನ್ನು ಅರಿತ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್, ತೀವ್ರ ಬೇಸರ ವ್ಯಕ್ತಪಡಿಸಿದರಲ್ಲದೇ, ಕೂಡಲೇ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳಲು ಸಚಿವರು ಆದೇಶ ನೀಡಿದ್ದಾರೆ

ಕಳೆದ ಒಂದು ವಾರದಿಂದ ವಿಕಾಸ ಸೌಧದಲ್ಲಿ ರಾಜ್ಯದ ವಿವಿಧ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಇತರ ಸದಸ್ಯರ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ಈ ಕುರಿತ ಪ್ರಕರಣಗಳು ಕಂಡು ಬಂದ ಕೂಡಲೇ ವೈದ್ಯಕೀಯ ಶಿಕ್ಷಣ ನಿರ್ದೇಶಕರು (ಡಿಎಂಇ) ಕೂಡಲೇ ಸಹಾಯಕ ಆಯುಕ್ತರಿಗೆ (ಕಂದಾಯ ಉಪವಿಭಾಗ) ದೂರುಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

ತಮ್ಮ ಮಕ್ಕಳ ಪರವಾಗಿ ಮಾಡಿದ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಪರಿತ್ಯಕ್ತ ಪೋಷಕರಿಗೆ ಸಚಿವರು ಕರೆ ನೀಡಿದರು.

ತಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳಲು ಆಗದೇ, ತೊರೆದಿದ್ದಾರೆ. ಕೆಲವರು ಆರ್ಥಿಕ ಸಂಕಷ್ಟಗಳಿಂದ ನಮ್ಮನ್ನು ಇಲ್ಲಿ ಬಿಟ್ಟಿದ್ದಾರೆ. ನಮ್ಮ ಆಸ್ತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ ಮಕ್ಕಳು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗೆ ಸೇರಿಸಿ ಹೊರಟುಹೋಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ, ವಸತಿ, ಆಶಯ ಉಚಿತವಾಗಿ ಸಿಗುತ್ತದೆ ಎಂಬ ಉದ್ದೇಶದಿಂದ ನಮ್ಮನ್ನು ಇಲ್ಲಿ ಬಿಟ್ಟುಹೋಗಿದ್ದಾರೆ ಎಂದು ಪರಿತ್ಯಕ್ತ ಪೋಷಕರು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಥ ಪರಿತ್ಯಕ್ತ ಹಿರಿಯ ನಾಗರಿಕರನ್ನು ಬಿಐಎಂಎಸ್ ಅಧಿಕಾರಿಗಳು ಬೆಳಗಾವಿ ಮತ್ತು ಸುತ್ತಮುತ್ತಲಿನ 70 ಹಿರಿಯ ನಾಗರಿಕರ ನಿವೃತ್ತಿ ಗೃಹಗಳಲ್ಲಿ ಅಥವಾ ವೃದ್ಧಾಶ್ರಮಗಳಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ. ಆದರೆ ಇನ್ನೂ ಅನೇಕರು ಆಸ್ಪತ್ರೆಗಳಲ್ಲಿಯೇ ಇದ್ದಾರೆ.

ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ, 2007 ರ ಅಡಿಯಲ್ಲಿ ಸಹಾಯಕ ಆಯುಕ್ತರು ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ದೂರುಗಳನ್ನು ಸಲ್ಲಿಸಬೇಕು ಎಂದು ಡಾ. ಪಾಟೀಲ್ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

“ಈ ಕಾನೂನಿನ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರಿಗೆ ಆರ್ಥಿಕ ಮತ್ತು ವೈದ್ಯಕೀಯ ಬೆಂಬಲವನ್ನು ಒದಗಿಸಬೇಕು ಎಂಬ ನಿಯಮವಿದೆ. ಅವರು ಹಾಗೆ ಮಾಡಲು ವಿಫಲವಾದರೆ, ಪೋಷಕರು ತಮ್ಮ ಮಕ್ಕಳ ಪರವಾಗಿ ಮಾಡಿದ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸುವ ಕಾನೂನುಬದ್ಧ ಹಕ್ಕು ಹೊಂದಿರುತ್ತಾರೆ” ಎಂದು ಡಾ. ಪಾಟೀಲ್ ಹೇಳಿದರು.

ಕಾಯ್ದೆಯ ಸೆಕ್ಷನ್ 23 ರ ಪ್ರಕಾರ, ಮಕ್ಕಳು ಆಸ್ತಿಯನ್ನು ಆನುವಂಶಿಕವಾಗಿ ಪಡೆದ ನಂತರ ಹೆತ್ತವರನ್ನು ನಿರ್ಲಕ್ಷಿಸಿದರೆ ಅಥವಾ ತ್ಯಜಿಸಿದರೆ, ವಿಲ್ ಅಥವಾ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಲು ಮತ್ತು ವಯಸ್ಸಾದ ಪೋಷಕರಿಗೆ ಮಾಲೀಕತ್ವವನ್ನು ಪುನಃ ಪಡೆಯಲು ಕಾಯ್ದೆಯಲ್ಲಿ ಅನುಮತಿ ಇದೆ ಎಂದು ತಿಳಿಸಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...