
ಬೆಂಗಳೂರು: ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ರಾಜ್ಯದ ನರ್ಸಿಂಗ್ ಕಾಲೇಜುಗಳಲ್ಲಿ ಅಧಿಕ ಶುಲ್ಕ ವಸೂಲು ಮಾಡುತ್ತಿರುವ ಬಗ್ಗೆ ಕಚೇರಿಗೆ ದೂರುಗಳು ಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳು, ಪೋಷಕರಿಗೆ ತೊಂದರೆಯಾಗಿದೆ. ಅಧಿಕ ಶುಲ್ಕದ ಹೊರೆ ತಪ್ಪಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ಐವರು ಸದಸ್ಯರ ಶುಲ್ಕ ನಿಯಂತ್ರಣ ಪ್ರಾಧಿಕಾರಿ ರಚಿಸಲಿದ್ದು, ನರ್ಸಿಂಗ್ ಕಾಲೇಜುಗಳ ಶುಲ್ಕ ಪರಿಶೀಲಿಸಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸರ್ಕಾರಿ ಕೋಟಾದಡಿ ಭರ್ತಿಯಾಗುವ ವಿದ್ಯಾರ್ಥಿಗಳಿಗೆ 10,000 ರೂ., ಮ್ಯಾನೇಜ್ಮೆಂಟ್ ಕೋಟಾದಲ್ಲಿ ಭರ್ತಿಯಾಗುವ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿ, ಹೊರ ರಾಜ್ಯದ ವಿದ್ಯಾರ್ಥಿಗಳಿಗೆ 1.40 ಲಕ್ಷ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
ರಾಜ್ಯದಲ್ಲಿ 611 ನರ್ಸಿಂಗ್ ಕಾಲೇಜುಗಳಿದ್ದು, 35 ಸಾವಿರ ಸೀಟ್ ಲಭ್ಯವಿದೆ. ಶುಲ್ಕವನ್ನು ಶೇಕಡ 20ರಷ್ಟು ಹೆಚ್ಚಳ ಮಾಡುವಂತೆ ನರ್ಸಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳು ಇತ್ತೀಚೆಗೆ ಮನವಿ ಮಾಡಿದ್ದು, ಇದನ್ನು ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿರಸ್ಕರಿಸಿದ್ದಾರೆ.