
ಬೆಂಗಳೂರು: ಕರ್ನಾಟಕದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜಾಗತಿಕ ಉದ್ಯೋಗಾವಕಾಶವನ್ನು ಹೆಚ್ಚಿಸಲು ಎಲ್ಲಾ ನರ್ಸಿಂಗ್ ಕಾಲೇಜುಗಳಲ್ಲಿ ವಿದೇಶಿ ಭಾಷಾ ಪ್ರಯೋಗಾಲಯಗಳ ಮೂಲಕ ವಿದೇಶಿ ಭಾಷಾ ತರಬೇತಿಯನ್ನು ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಕೌಶಲ್ಯಪೂರ್ಣ ದಾದಿಯರು ಮತ್ತು ಸಂಬಂಧಿತ ಆರೋಗ್ಯ ವೃತ್ತಿಪರರಿಗೆ ಅಂತರಾಷ್ಟ್ರೀಯ ಬೇಡಿಕೆ ಹೆಚ್ಚಾಗಿದ್ದು, ಹೀಗಾಗಿ ವಿದೇಶ ಭಾಷಾ ತರಬೇತಿ ಅಗತ್ಯವಿದೆ. ತರಬೇತಿ ಪಡೆದ ದಾದಿಯರು, ಸಂಬಂಧಿತ ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳಿಗೆ ಜಪಾನ್, ಜರ್ಮನಿ, ಇಟಲಿ ಆಸ್ಪತ್ರೆಗಳಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಈಗಾಗಲೇ ಈ ದೇಶದವರು ನಮ್ಮನ್ನು ಸಂಪರ್ಕಿಸಿದ್ದಾರೆ. ಅವರ ಸ್ಥಳೀಯ ಭಾಷೆ ತಿಳಿದಿರುವ ಅಭ್ಯರ್ಥಿಗಳು ಬೇಕಾಗಿದ್ದು, ಅದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.