
ಶೀಘ್ರದಲ್ಲೇ ಅಮ್ಮನಾಗುತ್ತಿರುವ ನಟಿ ದೀಪಿಕಾ ಪಡುಕೋಣೆ ಬಾಲಿವುಡ್‌ನ ಮೂವರು ಖಾನ್‌ಗಳು ಮತ್ತು ನಟಿ ಐಶ್ವರ್ಯಾ ರೈ ಅವರನ್ನೇ ಹಿಂದಿಕ್ಕಿದ್ದಾರೆ. IMDb ಕಳೆದ ದಶಕದಲ್ಲಿ ಹೆಚ್ಚು ವೀಕ್ಷಿಸಿದ ಭಾರತೀಯ ತಾರೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಟಾಪ್ 100 ಸ್ಟಾರ್‌ಗಳ ಹೆಸರಿದೆ. ಇದರಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್‌ರಿಂದ ಹಿಡಿದು ಐಶ್ವರ್ಯಾ ರೈ ಕೂಡ ಹಿಂದೆ ಬಿದ್ದಿದ್ದಾರೆ. ದೀಪಿಕಾ ಪಡುಕೋಣೆ ಅಗ್ರ ಸ್ಥಾನಕ್ಕೇರಿದ್ದಾರೆ.
ಈ ವರದಿ ಪ್ರಪಂಚದಾದ್ಯಂತ ಲಕ್ಷಾಂತರ IMDb ಗ್ರಾಹಕರು ಮತ್ತು ಅಭಿಮಾನಿಗಳ ಪೇಜ್ ವೀಕ್ಷಣೆಗಳನ್ನು ಆಧರಿಸಿದೆ. ಈ 100 ಸ್ಟಾರ್‌ಗಳ ಪಟ್ಟಿಯಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರೋದ್ಯಮದ ನಟ-ನಟಿಯರಿದ್ದಾರೆ. ಟಾಪ್ 10 ಪಟ್ಟಿಯನ್ನು ನೋಡಿದ್ರೆ ದೀಪಿಕಾ ಅಗ್ರಸ್ಥಾನದಲ್ಲಿದ್ದಾರೆ. ನಂತರ ಶಾರುಖ್, ಐಶ್ವರ್ಯಾ ರೈ, ಆಲಿಯಾ ಭಟ್, ಇರ್ಫಾನ್, ಅಮೀರ್ ಖಾನ್, ಸುಶಾಂತ್ ಸಿಂಗ್ ರಜಪೂತ್, ಸಲ್ಮಾನ್ ಖಾನ್, ಹೃತಿಕ್ ರೋಷನ್ ಮತ್ತು ಅಕ್ಷಯ್ ಕುಮಾರ್ ಅವರ ಹೆಸರುಗಳಿವೆ.
ಈ ಪಟ್ಟಿಯು 10 ವರ್ಷಗಳ ಡೇಟಾವನ್ನು ಆಧರಿಸಿದೆ. ಜನವರಿ 2014 ರಿಂದ ಏಪ್ರಿಲ್ 2024 ರವರೆಗಿನ ಡೇಟಾವನ್ನು ಪರಿಶೀಲಿಸಿ ಇದನ್ನು ತಯಾರಿಸಲಾಗಿದೆ. ದೀಪಿಕಾ ಪಡುಕೋಣೆ ಅವರ ಜನಪ್ರಿಯತೆ ಅವರನ್ನು ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದಿರುವುದು ಸ್ಪಷ್ಟವಾಗಿದೆ.
ದೀಪಿಕಾ ಪಡುಕೋಣೆ 2007 ರಲ್ಲಿ ಶಾರುಖ್ ಖಾನ್ ಅಭಿನಯದ “ಓಂ ಶಾಂತಿ ಓಂ” ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ್ದರು. ವೃತ್ತಿಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರೋ ದೀಪಿಕಾ, ‘ಕಾಕ್‌ಟೈಲ್’, ‘ಯೇ ಜವಾನಿ ಹೈ ದೀವಾನಿ’, ‘ಪಿಕು’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಪಠಾಣ್’, ‘ಜವಾನ್’ ಮತ್ತು ‘ಪದ್ಮಾವತ್’ ನಂತಹ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಸೆಳೆದಿದ್ದಾರೆ.
ಬಾಲಿವುಡ್ ಮಾತ್ರವಲ್ಲ 2017 ರಲ್ಲಿ ದೀಪಿಕಾ ಹಾಲಿವುಡ್ ಚಿತ್ರದಲ್ಲೂ ನಟಿಸಿದ್ದರು. “xXx: ರಿಟರ್ನ್ ಆಫ್ ಕ್ಸಾಂಡರ್ ಕೇಜ್” ನಲ್ಲಿ ವಿನ್ ಡೀಸೆಲ್ ಜೊತೆಗೆ ದೀಪಿಕಾ ಕಾಣಿಸಿಕೊಂಡಿದ್ದಾರೆ. ಸದ್ಯ ದೀಪಿಕಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.