
ಮಧ್ಯ ಪ್ರದೇಶದ ಜಾಬುವಾ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹದ ವೇಳೆ ಮದುವೆ ಹೆಣ್ಣುಗಳಿಗೆ ಕೊಡಲಾದ ಮೇಕಪ್ ಡಬ್ಬಗಳಲ್ಲಿ ಕಾಂಡೋಂಗಳು ಹಾಗೂ ಗರ್ಭನಿರೋಧಕ ಮಾತ್ರೆಗಳಿದ್ದ ವಿಚಾರವೀಗ ರಾಜಕೀಯ ಕೆಸರೆರಚಾಟಕ್ಕೆ ಗ್ರಾಸವಾಗಿದೆ.
ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ’ಮುಖ್ಯಮಂತ್ರಿ ಕನ್ಯಾ ವಿವಾಹ್/ನಿಖಾ’ ಯೋಜನೆಯ ಭಾಗವಾಗಿ ಜಿಲ್ಲೆಯ ತಾಂಡ್ಲಾ ಎಂಬಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. ಆರ್ಥಿಕವಾಗಿ ಹಿಂದುಳಿದ ವರ್ಗಗಳ 296 ಜೋಡಿ ಈ ವೇಳೆ ಹಸೆಮಣೆ ಏರಿವೆ. ಈ ವೇಳೆ ಮೇಲ್ಕಂಡ ವಸ್ತುಗಳನ್ನು ಮದುವೆ ಹೆಣ್ಣುಗಳ ಮೇಕಪ್ ಡಬ್ಬಗಳಲ್ಲಿ ಇಡಲಾಗಿತ್ತು.
“ಶಿವರಾಜ್ ಸಿಂಗ್ ಆಡಳಿತದಲ್ಲಿ ನಾಚಿಗೇಡಿನ ಘಟನೆಗಳು ನಡೆಯುತ್ತಿವೆ. ಮಧ್ಯ ಪ್ರದೇಶದ ಬಿಜೆಪಿ ಸರ್ಕಾರ ಕನ್ಯಾ ವಿವಾಹ ಯೋಜನೆಯಡಿ ಕೊಡಲಾಗುವ ಮೇಕಪ್ ಬಾಕ್ಸ್‌ಗಳಲ್ಲಿ ಕಾಂಡೋಂಗಳು ಹಾಗೂ ಗರ್ಭ ನಿರೋಧಕ ಮಾತ್ರೆಗಳನ್ನು ಕೊಡುತ್ತಿದೆ. ಶಿವರಾಜ್‌ಜೀ ನಿಮಗೆ ಸ್ವಲ್ಪವೂ ನಾಚಿಕೆ ಉಳಿದಿಲ್ಲವೇ?” ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕುಟುಂಬ ಯೋಜನೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಲ್ಲಿ ರಾಜ್ಯದ ಆರೋಗ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಏಪ್ರಿಲ್ 2006ರಲ್ಲಿ ಜಾರಿಗೆ ಬಂದ ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಮದುವೆಯಾಗುವ ವೇಳೆ ಸರ್ಕಾರ ಅವರ ಖಾತೆಗಳಿಗೆ ತಲಾ 55,000 ರೂ.ಗಳ ಸಹಾಯ ಧನ ವರ್ಗಾವಣೆ ಮಾಡುತ್ತದೆ.