ಬೆಂಗಳೂರು: ಶಕ್ತಿ ಯೋಜನೆ ಬಳಿಕ ಕೆಲ ಮಹಿಳಾ ಪ್ರಯಾಣಿಕರ ಎಡವಟ್ಟಿನಿಂದಾಗಿ ಕಂಡಕ್ಟರ್ ಗಳ ಕೆಲಸಕ್ಕೆ ಕುತ್ತು ಬಂದಿರುವ ಘಟನೆಗಳು ಬೆಳಕಿಗೆ ಬಂದಿದೆ.
ಹಲವು ಮಹಿಳಾ ಪ್ರಯಾಣಿಕರು ಟಿಕೆಟ್ ಪಡೆಯದೇ ಪ್ರಯಾಣಿಸಿದರೆ ಇನ್ನು ಹಲವು ಮಹಿಳಾ ಪ್ರಯಾಣಿಕರು ಟಿಕೆಟ್ ಪಡೆದು ನಿಗದಿತ ನಿಲ್ದಾಣ ಬರುವ ಮೊದಲೇ ಇಳಿದುಕೊಳ್ಳುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಮೇಲ್ವಿಚಾರಣೆ ಬಂದಾಗ ಸಿಕ್ಕಿ ಹಾಕಿಕೊಳ್ಳುವ ಕಂಡಕ್ಟರ್ ಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಸಸ್ಪೆಂಡ್ ಆಗುತ್ತಿದ್ದಾರೆ. ಇದೇ ರೀತಿ ಶಕ್ತಿ ಯೋಜನೆ ಜಾರಿ ಬಳಿಕ ರಾಜ್ಯದಲ್ಲಿ 300ಕ್ಕೂ ಹೆಚ್ಚು ನಿರ್ವಾಹಕರು ಅಮಾನತುಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಯಾದಾಗಿನಿಂದ ಬಸ್ ನಲ್ಲಿ ಪ್ರಯಾಣಿಕರ ಓಡಾಟ ಹೆಚ್ಚಾಗಿದ್ದು, ಕೆಎಸ್ ಆರ್ ಟಿಸಿ ನಾಲ್ಕು ನಿಗಮಗಳಿಗೂ ಆದಾಯವೂ ಹೆಚ್ಚಿದೆ. ಆದರೆ ಕೆಲ ನಿರ್ವಾಹಕರಿಗೆ ಹೊಸ ತಲೆನೋವು ಶುರುವಾಗಿದೆ.
ಉಚಿತ ಪ್ರಯಾಣಕ್ಕೆ ಮಹಿಳೆಯರಿಗೆ ಅವಕಾಶ ನೀಡಿದ್ದರೂ ಟಿಕೆಟ್ ಪಡೆಯಬೇಕು. ನಿರ್ವಾಹಕರು ಪ್ರಯಾಣಿಕರು ಹೋಗಬೇಕಾದ ನಿಲ್ದಾಣದವರೆಗೆ ಶೂನ್ಯ ಟಿಕೆಟ್ ನೀಡುತ್ತಾರೆ. ಆದರೆ ಹೀಗೆ ಟಿಕೆಟ್ ಪಡೆಯುವ ಹಲವು ಮಹಿಳೆಯರು ನಿಗದಿತ ನಿಲ್ದಾಣಕ್ಕಿಂತ ಮೊದಲೇ ಇಳಿದು ಕಂಡಕ್ಟರ್ ಗಳನ್ನು ಪೇಚಿಗೆ ಸಿಲುಕಿಸುತ್ತಾರೆ. ಮಾರ್ಗ ಮಧ್ಯೆಯೇ ಮಹಿಳಾ ಪ್ರಯಾಣಿಕರು ಇಳಿದುಕೊಳ್ಳುವುದರಿಂದ ಬಳಿಕ ಬರುವ ಚೆಕಿಂಗ್ ಅಧಿಕಾರಿಗಳ ಕೈಗೆ ಕಂಡಕ್ಟರ್ ಸಿಕ್ಕಿ ಬಿದ್ದು ಸಂಕಷ್ಟಕ್ಕೀಡಾಗುತ್ತಾರೆ. ಅಧಿಕಾರಿಗಳು ಪರಿಶೀಲಿಸಿದಾಗ ಮಹಿಳಾ ಪ್ರಯಾಣಿಕರೇ ಇರುವುದಿಲ್ಲ…. ಇಲಾಖೆಗೆ ತಪ್ಪು ಮಾಹಿತಿ ನೀಡಿದ ಆರೋಪಕ್ಕೆ ನಿರ್ವಾಹಕ ಅಮಾನತುಗೊಳ್ಳುತ್ತಾರೆ.
ಮಹಿಳಾ ಪ್ರಯಾಣಿಕರ ಎಡವಟ್ಟು ಹಾಗೂ ನಿರ್ವಾಹಕರ ಸ್ವಯಂಕೃತ ತಪ್ಪುಗಳಿಂದಾಗಿ ಈವರೆಗೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ 300ಕ್ಕೂ ಹೆಚ್ಚು ಕಂಡಕ್ಟರ್ ಗಳು ಸಸ್ಪೆಂಡ್ ಆಗಿದ್ದಾರೆ ಎಂದು ತಿಳಿದುಬಂದಿದೆ.