ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಜಾರಿಗೊಳಿಸಿದ ಶಕ್ತಿ ಯೋಜನೆ ಒಂದು ತಿಂಗಳು ಪೂರ್ಣಗೊಳಿಸಿದ್ದು, ಈ ಅವಧಿಯಲ್ಲಿ 15.57 ಕೋಟಿ ಮಹಿಳಾ ಪ್ರಯಾಣಿಕರು ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ.
ಟಿಕೆಟ್ ವೆಚ್ಚ 368.22 ಕೋಟಿ ರೂ ಆಗಿದೆ. ಜೂನ್ 11 ರಿಂದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಆರಂಭವಾಗಿದ್ದು, ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಒಂದೇ ತಿಂಗಳಲ್ಲಿ ನಾಲ್ಕು ನಿಗಮಗಳಲ್ಲಿ 15.57ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಬಿಎಂಟಿಸಿಯಲ್ಲಿ ಅತಿ ಹೆಚ್ಚು 5.02 ಕೋಟಿ ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ. ಕೆಎಸ್ಆರ್ಟಿಸಿಯಲ್ಲಿ 4.67 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 2.13 ಕೋಟಿ, NWKRTC ಯಲ್ಲಿ 3.74 ಮಹಿಳೆಯರು ಪ್ರಯಾಣಿಸಿದ್ದಾರೆ.
ಬಿಎಂಟಿಸಿಯಲ್ಲಿ ಮಹಿಳಾ ಪ್ರಯಾಣಿಕರಿಗೆ 64.72 ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ. ಕೆಎಸ್ಆರ್ಟಿಸಿಯಲ್ಲಿ 137.62 ಕೋಟಿ ರೂ., ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ.ಯಲ್ಲಿ 95.45 ಕೋಟಿ ರೂ., ಕೆ.ಕೆ.ಆರ್.ಟಿ.ಸಿ.ಯಲ್ಲಿ 70.42 ಕೋಟಿ ರೂ. ಮೌಲ್ಯದ ಟಿಕೆಟ್ ನೀಡಲಾಗಿದೆ.
ನಿಗಮಗಳಿಗೆ ಸರ್ಕಾರದಿಂದ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ. ಬಜೆಟ್ ನಲ್ಲಿ 4000 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದ್ದು, ನಿಗಮಗಳಿಗೆ ಅನುದಾನ ದೊರೆತಲ್ಲಿ ಆರ್ಥಿಕ ಸದೃಢತೆಗೆ ಅನುಕೂಲವಾಗಲಿದೆ.