ಬೆಂಗಳೂರು: ಶಕ್ತಿ ಯೋಜನೆ ಜಾರಿಗೆ ಸಾರಿಗೆ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ. 10 ಪುಟಗಳ ಮಾರ್ಗಸೂಚಿಯನ್ನು ಸಾರಿಗೆ ಇಲಾಖೆ ಪ್ರಕಟಿಸಿದ್ದು, ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದ್ದು, ಸ್ಮಾರ್ಟ್ ಕಾರ್ಡ್ ಪಡೆಯುವವರೆಗೆ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು.
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಡಿಎಲ್, ಸರ್ಕಾರ ನೀಡಿದ ಅಂಗವಿಕಲರ ಕಾರ್ಡ್, ಹಿರಿಯ ನಾಗರೀಕರ ಗುರುತಿನ ಚೀಟಿ ಸೇರಿ ಸರ್ಕಾರದ ಗುರುತಿನ ಚೀಟಿ ತೋರಿಸಿ ಸಂಚರಿಸಲು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.
ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್, ಐರಾವತ, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಫ್ಲೈ ಬಸ್ ಗಳಲ್ಲಿ ಉಚಿತ ಪ್ರಯಾಣ ಇರುವುದಿಲ್ಲ.
ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ದೂರದ ಯಾವುದೇ ಮಿತಿ ಇಲ್ಲ.
ರಾಜ್ಯದ ಒಳಗೆ ಮಾತ್ರ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.
ಅಂತರ ರಾಜ್ಯ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ.
ನಿಗದಿಕಿಂತ ಹೆಚ್ಚಿನ ಪ್ರಮಾಣದ ಲಗೇಜ್ ಎಂದರೆ ಟಿಕೆಟ್ ಪಡೆಯಬೇಕು.