ಬೆಂಗಳೂರು: ರಾಜ್ಯದ ಎಲ್ಲಾ ಹೆಣ್ಣು ಮಕ್ಕಳಿಗೆ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಆರಂಭಿಸಲಾಗಿದ್ದು, ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್ ಸಂಖ್ಯೆ 77.56 ಕೋಟಿಗೆ ಏರಿಕೆಯಾಗಿದೆ. 4 ಸಾರಿಗೆ ನಿಗಮಗಳಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್ ಮೌಲ್ಯ 1808 ಕೋಟಿ ರೂ. ನಷ್ಟಾಗಿದೆ.
ಇನ್ನು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಮಾಸಿಕ 2,000 ರೂ. ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೆ 1.16 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. 1.08 ಕೋಟಿ ಮಹಿಳೆಯರಿಗೆ ಹಣ ಜಮೆಯಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಹಾಯಧನ ಪಾವತಿಗಾಗಿ 4449 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀಸಬಲೀಕರಣಕ್ಕೆ ಬದ್ಧವಾಗಿ ಶ್ರಮಿಸುತ್ತಿದೆ. ಪ್ರಶಕ್ತ ಸಾಲಿನ ಬಜೆಟ್ ನಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳಿಗೆ 70,427 ಕೋಟಿ ರೂ. ಹಣ ಮೀಸಲಿಟ್ಟು ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ನವಯುಗಕ್ಕೆ ನಾಂದಿ ಹಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ನಾಡಿನ ಎಲ್ಲಾ ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆಯಡಿ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿ, ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ. ಇದರಿಂದ ಶಿಕ್ಷಣ, ಉದ್ಯೋಗ ಮುಂತಾದ ವಿಷಯಗಳಿಗೆ ಹೆಣ್ಣುಮಕ್ಕಳು ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ, ಸ್ವಾವಲಂಬಿಗಳಾಗಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿರುವುದು ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಯೋಜನೆ ಜಾರಿಗೊಂಡ ನಂತರದ 126 ದಿನಗಳ ಅವಧಿಯಲ್ಲಿ 77 ಕೋಟಿಗೂ ಅಧಿಕ ಉಚಿತ ಪ್ರಯಾಣದ ಟಿಕೆಟ್ ನೀಡಲಾಗಿದ್ದು, ಇದಕ್ಕಾಗಿ ನಮ್ಮ ಸರ್ಕಾರವೂ 1808 ಕೋಟಿ ರೂ. ಹಣ ವಿನಿಯೋಗಿಸಿದೆ ಎಂದು ತಿಳಿಸಿದ್ದಾರೆ.
ಕುಟುಂಬ ನಿರ್ವಹಣೆಯ ಹೊಣೆಹೊತ್ತ ಮನೆಯ ಯಜಮಾನಿಯರು ನಿತ್ಯ ಎದುರಿಸುವ ಸವಾಲುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ಧನಸಹಾಯ ನೀಡಲಾಗುತ್ತಿದೆ. ರಾಜ್ಯದ 1.08 ಕೋಟಿ ಮಹಿಳೆಯರಿಗೆ ಈಗಾಗಲೇ ಎರಡು ತಿಂಗಳ ಹಣ ಜಮೆಯಾಗಿದ್ದು, ಈ ಉದ್ದೇಶಕ್ಕಾಗಿ ಸರ್ಕಾರವು 4,449 ಕೋಟಿ ಅನುದಾನ ಬಳಕೆ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.