ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ‘ಶಕ್ತಿ ಯೋಜನೆ’ ನಿಲ್ಲಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಪ್ರಸ್ತುತ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಜೆಟ್ನಲ್ಲಿ ಘೋಷಿಸಿರುವ ರೂ.52,009 ಕೋಟಿ ಪೈಕಿ ಈಗಾಗಲೇ ರೂ.24,235 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಯೋಜನೆಗಳ ಲಾಭ ತಲುಪುವಂತಾಗಲು ಇ ಆಡಳಿತ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಲಾಗುತ್ತಿದೆ.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ‘ಶಕ್ತಿ ಯೋಜನೆ’ ನಿಲ್ಲಲ್ಲ, ಶಕ್ತಿ ಯೋಜನೆ ಪರಿಷ್ಕರಿಸುವುದು ಸರ್ಕಾರದ ಹಂತದಲ್ಲಿ ಇಲ್ಲ. ಶಕ್ತಿ ಯೋಜನೆ ಪರಿಷ್ಕರಿಸುವ ಉದ್ದೇಶ ಹಾಗೂ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದರು.
ಡಿಸಿಎಂ ಡಿಕೆಶಿ ಹೇಳಿದ್ದೇನು..?
ಶಕ್ತಿ ಯೋಜನೆ ಮುಂದುವರಿಸುವ ಬಗ್ಗೆ ಮರುಪರಿಶೀಲನೆ ನಡೆಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ವೋಲ್ವೋ ಬಸ್ ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ, ಶಕ್ತಿ ಯೋಜನೆ ಬಗ್ಗೆ ಮರು ಚಿಂತನೆ ನಡೆಸುವಂತೆ ಮಹಿಳೆಯರಿಂದಲೇ ಒತ್ತಡವಿದೆ. ಅನೇಕ ಹೆಣ್ಣು ಮಕ್ಕಳು ನಮಗೆ ಟಿಕೆಟ್ ಕೊಳ್ಳುವಂತಹ ಶಕ್ತಿ ಇದೆ. ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ನಮಗೆ ಉಚಿತ ಪ್ರಯಾಣ ಬೇಡವೆಂದು ಹೇಳಿದ್ದಾರೆ.
ಅನೇಕರು ಟ್ವೀಟ್ ಮತ್ತು ಇ-ಮೇಲ್ ಮೂಲಕ ಈ ಬಗ್ಗೆ ತಿಳಿಸುತ್ತಿರುವುದಾಗಿ ಡಿಸಿಎಂ ಹೇಳಿದ್ದಾರೆ.
ಅನುಕೂಲಸ್ತ ಸ್ಥಿತಿಯಲ್ಲಿರುವ ಶೇಕಡ 5-10ರಷ್ಟು ಹೆಣ್ಣು ಮಕ್ಕಳು ಈ ಬಗ್ಗೆ ಹೇಳುತ್ತಿದ್ದು, ನಾವು ಹಣ ನೀಡಿ ಟಿಕೆಟ್ ಪಡೆದುಕೊಳ್ಳಲು ಮುಂದಾದರೂ, ಹಣ ಪಡೆದುಕೊಳ್ಳುತ್ತಿಲ್ಲ. ಸಾರಿಗೆ ಸಂಸ್ಥೆ ಬಸ್ಗಳಲ್ಲಿ ನಿರ್ವಾಹಕರು ಹಣ ಪಡೆದು ಟಿಕೆಟ್ ಕೊಡುತ್ತಿಲ್ಲ ಎಂದು ಮಹಿಳೆಯರು ನಮಗೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶಕ್ತಿ ಯೋಜನೆ ಮರುಪರಿಶೀಲಿಸುವ ಬಗ್ಗೆ ಚರ್ಚೆ ಮಾಡುತ್ತೇವೆ. ಶೀಘ್ರವೇ ಸಾರಿಗೆ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಶಕ್ತಿ ಯೋಜನೆ ಮರುಪರಿಶೀಲನೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.