ಚಿಕ್ಕಬಳ್ಳಾಪುರ: ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಬೆನ್ನಲ್ಲೇ ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಜನವೋ ಜನ… ಇರುವ ಬಸ್ ಗಳು ಸಾಲದೇ ಹಳೆಯ ಬಸ್ ಗಳಿಗೂ ಬಣ್ಣ ಬಳಿದು ರಸ್ತೆಗೆ ಇಳಿಸುವ ಕೆಲಸ ಆರಂಭವಾಗಿದೆ.
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಸಾರಿಗೆ ಸಂಸ್ಥೆಗಳು ಹಳೆಯ ಬಸ್ ಗಳಿಗೂ ಸುಣ್ಣ ಬಣ್ಣ ಬಳಿದು ರೋಡಿಗೆ ಇಳಿಸುತ್ತಿದ್ದಾರೆ. ಗುಜರಿ ಸೇರಿದ್ದ ಬಸ್ ಗಳು, ಗ್ಯಾರೇಜ್ ಸೇರಿದ್ದ ಬಸ್ ಗಳನ್ನು ರಿಪೇರಿ ಮಾಡಿಸಿ, ಪೇಂಟ್ ಬಳಿದು ಮತ್ತೆ ರಸ್ತೆಗಿಳಿಸಲಾಗುತ್ತಿದ್ದು, ಹಳೆ ಬಸ್ ಗಳು ಹೊಸ ಲುಕ್ ನಲ್ಲಿ ಮಿಂಚುತ್ತಿವೆ.
ಶಕ್ತಿ ಯೋಜನೆ ಬಳಿಕ ಬಸ್ ಗಳು ಫುಲ್ ರಶ್ ಆಗಿ ಸಂಚರಿಸುತ್ತಿದ್ದು, ಸಂಸ್ಥೆಯಲ್ಲಿ ಬಸ್ ಗಳ ಕೊರತೆ ಎದುರಾಗಿದೆ. ಹೀಗಾಗಿ ಹಳೆಯ ಬಸ್ ಗಳನ್ನೇ ರಿಪೇರಿ ಮಾಡಲಾಗುತ್ತಿದ್ದು, 3ರಿಂದ 5 ಲಕ್ಷದವರೆಗೂ ಖರ್ಚು ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ವಿಭಾಗೀಯ ಕಚೇರಿಯಲ್ಲಿಯೇ 15 ಹಳೇ ಬಸ್ ಗಳಿಗೆ ಹೊಸ ಲುಕ್ ನೀಡಲಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ಕುಶಲಕರ್ಮಿ ಶ್ರೀನಿವಾಸ್ ತಿಳಿಸಿದ್ದಾರೆ.
ಶಕ್ತಿ ಯೋಜನೆ ಬಳಿಕ ಒಂದು ತಿಂಗಳಲ್ಲಿ ಚಿಕ್ಕಬಳ್ಳಾಪುರ ಸಾರಿಗೆ ವಿಭಾಗದಲ್ಲಿ 1 ಕೋಟಿ ರೂ ಲಾಭವಾಗಿದೆ. ಈ ಮೂಲಕ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಯೂ ಲಾಭದತ್ತ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ.