ಬೆಳಗಾವಿ: ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಗಳಲ್ಲಿ ಜನವೋ ಜನ.. ಬಸ್ ಗಳು ಫುಲ್ ರಶ್ ಆಗಿ ಓಡಾಡುತ್ತಿದ್ದು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾಜ್ಯದ ಹಲವೆಡೆಗಳಲ್ಲಿ ವಿದ್ಯಾರ್ಥಿಗಳ ಸಹನೆ ಕಟ್ಟೆಯೊಡೆದಿದೆ.
ಸರ್ಕಾರಿ ಬಸ್ ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಬಸ್ ಗಳನ್ನು ನಿಲ್ಲಿಸದೇ ತೆರಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲೆ-ಕಾಲೇಜುಗಳಿಗೆ ಹೋಗಲು, ಪರೀಕ್ಷೆಗೆ ಹಾಜರಾಗುವುದೂ ಸಾಧ್ಯವಾಗದ ಸ್ಥಿತಿ. ಬಸ್ ನಿಲ್ಲಿಸದೇ ತೆರಳಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಗಳು ಸರ್ಕಾರಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರದಲ್ಲಿ ನಡೆದಿದೆ.
ಸಮಯಕ್ಕೆ ಸರಿಯಾಗಿ ಬಸ್ ಗಳು ಬರುತ್ತಿಲ್ಲ, ಬರುವ ಬಸ್ ಗಳು ರಶ್ ಆಗಿ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಚಾಲಕ ತೆರಳುತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಆಕ್ರೋಶಕ್ಕೆ ಬಸ್ಸಿನ ಹಿಂಬದಿ ಗಾಜು ಪುಡಿ ಪುಡಿಯಾಗಿವೆ. ವಿದ್ಯಾರ್ಥಿಗಳು ಬಸ್ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಕಿಡಿಕಾರಿದ್ದಾರೆ.