ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಲೇ ಇರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ನಟ ಶಾರುಖ್ ಬಿಜೆಪಿಯ ’ಕ್ರೂರಿ’ ಹಾಗೂ ’ಪ್ರಜಾಪ್ರಭುತ್ವ ವಿರೋಧಿ’ ನೀತಿಯ ಸಂತ್ರಸ್ತರಾಗಿದ್ದಾರೆ ಎಂದಿದ್ದಾರೆ.
ಮುಂಬಯಿಗೆ ಮೂರು ದಿನಗಳ ಭೇಟಿಯಲ್ಲಿರುವ ಮಮತಾ ಬ್ಯಾನರ್ಜಿ, ಇದೇ ವೇಳೆ ಇಲ್ಲಿನ ಪೌರ ಸಮುದಾಯದೊಂದಿಗೆ ಸಂವಹನ ನಡೆಸಿದ್ದಾರೆ. ಇದೇ ವೇಳೆ ಚಿತ್ರ ನಿರ್ಮಾಣಕಾರ ಮಹೇಶ್ ಭಟ್, ಸಂಕಲನಕಾರ ಜಾವೇದ್ ಅಖ್ತರ್, ನಟರಾದ ಶತ್ರುಘ್ನ ಸಿನ್ಹಾ, ರಿಚಾ ಚಡ್ಡಾ, ಸ್ವರಾ ಭಾಸ್ಕರ್, ಕಾಮೆಡಿಯನ್ ಮುನಾವರ್ ಫರೂಖಿ, ಸುದೀಂಧ್ರ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
“ಭಾರತವು ಮಾನವ ಶಕ್ತಿಯನ್ನು ಇಷ್ಟಪಡುತ್ತದೆಯೇ ಹೊರತು ತೋಳ್ಬಲವನ್ನಲ್ಲ. ವಿವಿಧತೆಯಲ್ಲಿ ಏಕತೆ ನಮ್ಮ ಮೂಲ. ದುರದೃಷ್ಟವಶಾತ್ ನಾವೀಗ ಬಿಜೆಪಿಯ ಕ್ರೂರಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಅನೈತಿಕ ವರ್ತನೆಯನ್ನು ಎದುರಿಸುತ್ತಿದ್ದೇವೆ,” ಎಂದು ಮಹೇಶ್ ಭಟ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಮತಾ, “ಮಹೇಶ್ ಭಟ್‌ರನ್ನು ಸಂತ್ರಸ್ತರನ್ನಾಗಿ ಮಾಡಲಾಯಿತು ಎಂದು ನನಗೆ ಗೊತ್ತಿದೆ, ಶಾರುಖ್ ಸಹ ತೊಂದರೆ ಅನುಭವಿಸಿದ್ದಾರೆ…. ಇಲ್ಲಿ ಇನ್ನಷ್ಟು ಮಂದಿ ಇದ್ದಾರೆ… ಕೆಲವರು ತಮ್ಮ ಬಾಯಿ ತೆರೆಯಬಹುದು ಕೆಲವರಿಗೆ ಆಗೋದಿಲ್ಲ,” ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
ಖಾನ್‌ರ ಪುತ್ರ ಆರ್ಯನ್ ಖಾನ್‌ನನ್ನು ಕೆಲ ದಿನಗಳ ಹಿಂದೆ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಸಿಬ್ಬಂದಿ ಬಂಧಿಸಿದ್ದರು. ಮುಂಬಯಿ ಬಳಿ ಕ್ರೂಸ್ ಹಡಗೊಂದರ ಮೇಲೆ ರೇಡ್ ಮಾಡಿದ್ದ ಎನ್‌ಸಿಬಿ ಸಿಬ್ಬಂದಿ ಭಾರೀ ಪ್ರಮಾಣದಲ್ಲಿ ಮಾದಕ ದ್ಯವ್ಯ ವಶಪಡಿಸಿಕೊಂಡು, ಆರ್ಯನ್ ಖಾನ್ ಹಾಗೂ ಆತನ ಸಹಚರರನ್ನು ಬಂಧಿಸಿದ್ದರು.
ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡ ಆರ್ಯನ್ ಖಾನ್, ಒಂದು ತಿಂಗಳ ಸೆರೆವಾಸ ಮುಗಿಸಿ ಹೊರ ಬಂದಿದ್ದಾನೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರ್ಯನ್ ಖಾನ್‌ಗೆ ಶಿಕ್ಷೆ ನೀಡಲು ಸಾಧ್ಯವಾಗಿಲ್ಲ.