
ಭಾರತದ ಅತಿ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಎರಡನೇ ಪುತ್ರ ಅನಂತ್ ಅಂಬಾನಿಯವರ ವಿವಾಹ ರಾಧಿಕಾ ಮರ್ಚೆಂಟ್ ಜೊತೆ ನೆರವೇರುತ್ತಿದ್ದು, ಗುಜರಾತಿನ ಜಾಮ್ ನಗರದಲ್ಲಿ ಇದಕ್ಕಾಗಿ ಅದ್ದೂರಿ ವೇದಿಕೆ ನಿರ್ಮಿಸಲಾಗಿದೆ. ಇದಕ್ಕೂ ಮುನ್ನ ವಿವಾಹಪೂರ್ವ ಕಾರ್ಯಕ್ರಮಗಳು ನಡೆಯುತ್ತಿದ್ದು, ದೇಶ – ವಿದೇಶಗಳ ಗಣ್ಯರು, ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಖ್ಯಾತ ಕ್ರೀಡಾಪಟುಗಳು ಈಗಾಗಲೇ ಜಾಮ್ ನಗರಕ್ಕೆ ಬಂದಿಳಿದಿದ್ದಾರೆ.
ಖ್ಯಾತ ಹಾಲಿವುಡ್ ಗಾಯಕಿ ರಿಯಾನಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಇದಕ್ಕಾಗಿ ಆಕೆಗೆ 50 ಕೋಟಿ ರೂಪಾಯಿಗಳಿಗೂ ಅಧಿಕ ಸಂಭಾವನೆ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಿಯಾನ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಕುಣಿದು ಕುಪ್ಪಳಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ವೇದಿಕೆಗಳಲ್ಲಿ ವೈರಲ್ ಆಗಿದೆ.
ಇದರ ಮಧ್ಯೆ ಅನಂತ್ ಅಂಬಾನಿಯವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್, ಬಂದ ಅತಿಥಿಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದು ಇದರ ವಿಡಿಯೋ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಜೈ ಶ್ರೀ ರಾಮ್, ದೇವರು ನಿಮ್ಮೆಲ್ಲರಿಗೂ ಒಳ್ಳೆಯದನ್ನು ಮಾಡಲಿ. ನೀವೆಲ್ಲರೂ ನೃತ್ಯ ಕಾರ್ಯಕ್ರಮ ವೀಕ್ಷಿಸಿದ್ದೀರಿ ಅಲ್ಲದೆ ಸಹೋದರ – ಸಹೋದರಿಯರು ನೃತ್ಯ ಕೂಡ ಮಾಡಿದ್ದಾರೆ. ಪ್ರಾರ್ಥನೆ ಮತ್ತು ಆಶೀರ್ವಾದದೊಂದಿಗೆ ಎಲ್ಲರೂ ಒಟ್ಟಾಗಿ ಸಾಗೋಣ ಎಂದು ಶಾರುಖ್ ಖಾನ್ ಹೇಳಿದ್ದಾರೆ.