ಮಂಡಲ-ಮಕರವಿಳಕ್ಕು ಮಹೋತ್ಸವ ಮುಗಿರುವ ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗಿದೆ ಟ್ರ್ಯಾವಂಕೂರ್ ದೇವಸ್ವಂ ಬೋರ್ಡ್ ತಿಳಿಸಿದೆ.
ಈ ವರ್ಷ ಶಬರಿಮಲೆಗೆ 53 ಲಕ್ಷ ಭಕ್ತರು ಆಗಮಿಸಿ ಅಯ್ಯಪ್ಪಸ್ವಾಮಿ ದರ್ಶನ ಪಡೆದಿದ್ದಾರೆ. ಮಂಡಲ-ಮಕರವಿಳಕ್ಕು ಮಹೋತ್ಸವ ಮುಗಿದ ಹಿನ್ನೆಲೆಯಲ್ಲಿ ಪಂದಳ ರಾಜ ಕುಟುಂಬದ ಪ್ರತಿನಿಧಿ ತ್ರಿಕ್ಕೇಟನಲ್ ರಾಜರಾಜ ಶರ್ಮಾ ಅವರು ದರ್ಶನ ಪಡೆದ ಬಳಿಕ ಬೆಳಿಗ್ಗೆ 6:30ಕ್ಕೆ ದೇವಾಲಯವನ್ನು ಮುಚ್ಚಲಾಯಿತು. ಇದಕ್ಕೂ ಮುನ್ನ ಬೆಳಿಗ್ಗೆ 5 ಗಂಟೆಗೆ ದೇಗುಲದ ಪೂರ್ವ ಮಂಡಪಂನಲ್ಲಿ ಗಣಪತಿ ಹೋಮ ನೆರವೇರಿಸಲಾಯಿತು ಎಂದು ತಿಳಿಸಿದೆ.
ಬಳಿಕ ಅಯ್ಯಪ್ಪ ಸ್ವಾಮಿ ಮೂರ್ತಿಗೆ ಮೇಲ್ ಶಾಂತಿ ಅರುಣ್ ಕುಮಾರ್ ನಂಬೂದಿರಿಯವರು ರುದ್ರಾಕ್ಷಿ ಮಾಲೆ ಧರಿಸಿ, ಯೋಗ ದಂಡ ಕೈಯಲ್ಲಿ ಹಿಡಿದುಕೊಂಡು ವಿಭೂತಿಯಾಭಿಷೇಕ ನಡೆಸಿದರು. ಬಳಿಕ ಹರಿವರಾಸನಮ್ ಪಠಿಸಿ ದೀಪ ಆರಿಸಿ ದೇಗುಲದ ಬಾಗಿಲನ್ನು ಮೇಲ್ ಶಾಂತಿಯವರು ಮುಚ್ಚಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.