ಬೆಂಗಳೂರು: ಗ್ರಂಥಾಲಯ ಇಲಾಖೆ ಅಧಿಕಾರಿಗಳು ತಮ್ಮದೇ ಇಲಾಖೆಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವುದು ನಿಜವೆಂದು ಈ ಬಗ್ಗೆ ರಚಿಸಲಾಗಿದ್ದ ಆಂತರಿಕ ದೂರು ಸಮಿತಿ ವರದಿಯಲ್ಲಿ ತಿಳಿಸಿದೆ.
ಸಂತ್ರಸ್ತೆಯೊಬ್ಬರು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಲಾ ಶಿಕ್ಷಣ ಮತ್ತು ಗ್ರಂಥಾಲಯ ಇಲಾಖೆ ಆಂತರಿಕ ಸಮಿತಿ ರಚಿಸಿದ್ದು, ಈ ಸಮಿತಿ ಸುದೀರ್ಘ ವಿಚಾರಣೆ ನಡೆಸಿದ್ದು, ವಿವರ ಒಳಗೊಂಡ ವರದಿಯನ್ನು ಇಲಾಖೆಗೆ ಸಲ್ಲಿಸಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್ ಕುಮಾರ್ ಹೊಸಮನಿ, ಉಪನಿರ್ದೇಶಕ ಹೆಚ್ ಚಂದ್ರಶೇಖರ್, ಗ್ರಂಥಾಲಯ ಸಹಾಯಕ ಹೆಚ್.ಜಿ. ನಾರಾಯಣಮೂರ್ತಿ ಸೇರಿದಂತೆ ಮೂವರು ಅಧಿಕಾರಿಗಳು ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡು ಅನುಕೂಲ ಮಾಡಿಕೊಡುವುದಾಗಿ ಆಮಿಷ ಒಡ್ಡುವ, ಶಿಸ್ತು ಕ್ರಮ ಕೈಗೊಳ್ಳುವುದಾಗಿ ಬೆದರಿಸುವ ಮೂಲಕ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವುದು ನಿಜವೆಂದು ಹೇಳಲಾಗಿದೆ.