ತಿರುವನಂತಪುರಂ: ಹೆಣ್ಣು ಮಕ್ಕಳು ಮಾತ್ರವೇ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವುದಿಲ್ಲ. ಬಾಲಕರು ಕೂಡ ಇಂತಹ ದೌರ್ಜನ್ಯ ಎದುರಿಸುತ್ತಾರೆ. ಪೋಕ್ಸೋ ಪ್ರಕರಣದಲ್ಲಿ ಅನೇಕ ಬಾಲಕರು ಕೂಡ ಸಂತ್ರಸ್ತರು ಎಂದು ಕೇರಳ ಹೈಕೋರ್ಟ್ ಹೇಳಿದೆ.
ಪುರುಷರೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ಕೇರಳ ಹೈಕೋರ್ಟ್ ಬುಧವಾರ ಫೆಬ್ರವರಿ 28 ರಂದು ವೈದ್ಯರೊಬ್ಬರ ಅರ್ಜಿಯನ್ನು ಪರಿಗಣಿಸುವಾಗ ಮೌಖಿಕ ಅವಲೋಕನದಲ್ಲಿ ಹೇಳಿದೆ.
ಲೈಂಗಿಕ ದೌರ್ಜನ್ಯವು ಹುಡುಗಿಯರಿಗೆ ಮಾತ್ರ ಸೀಮಿತವಾಗಿಲ್ಲ, ಇದು ಹುಡುಗರಲ್ಲಿಯೂ ಸಂಭವಿಸುತ್ತದೆ. ಇದು ಅಪರೂಪ, ಆದರೆ ಇದು ನಡೆಯುತ್ತಿದೆ ಎಂದು ನನಗೆ ತಿಳಿದಿದೆ. ಆದರೆ ಸಾಮಾನ್ಯವಾಗಿ ನಾವು ಮಹಿಳೆಯರನ್ನು ಗಮನಿಸುತ್ತೇವೆ. ಸಾಮಾನ್ಯವಾಗಿ ಶೇಕಡ 99 ರಷ್ಟು ಪ್ರಕರಣಗಳಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ತುತ್ತಾದರೂ, ಪುರುಷರು, ಬಾಲಕರು ಕೂಡ ಸಂತ್ರಸ್ತರಿರುತ್ತಾರೆ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದವರ ಪರಿಶೀಲನೆಗೆ ಕೇವಲ ಮಹಿಳಾ ಸ್ತ್ರೀರೋಗ ತಜ್ಞವೈದ್ಯರನ್ನು ಮಾತ್ರ ಕರೆಸಲಾಗುವ ಮಾರ್ಗಸೂಚಿಯನ್ನು ಪ್ರಶ್ನಿಸಿ ವೈದ್ಯರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ಅಂತಿಮವಾಗಿ, ಹೈಕೋರ್ಟ್ ಮಾರ್ಚ್ 5 ರಂದು ವಿಚಾರಣೆಗೆ ಒಪ್ಪಿಗೆ ನೀಡಿತು.