ಬೆಂಗಳೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ತಾಲೂಕಿನ ಹಂಗರಹಳ್ಳಿಯ ಶ್ರೀಧ್ಯ ಚೌಡೇಶ್ವರಿ ದೇವಾಲಯ ಶ್ರೀ ಮಠದ ಬಾಲ ಮಂಜುನಾಥ ಸ್ವಾಮೀಜಿ ವಿರುದ್ಧ ಆರೋಪ ನಿಗದಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ.
ವಿಚಾರಣೆ ರದ್ದು ಕೋರಿ ಬಾಲ ಮಂಜುನಾಥ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠದಲ್ಲಿ ನಡೆದು ಈ ಆದೇಶ ನೀಡಲಾಗಿದೆ.
ಅರ್ಜಿದಾರರ ಮನವಿ ಪುರಸ್ಕರಿಸಿದ ಹೈಕೋರ್ಟ್, ಪ್ರತಿವಾದಿಯಾಗಿರುವ ಹುಲಿಯೂರುದುರ್ಗ ಠಾಣೆ ಪೊಲೀಸರು ಮತ್ತು ಪ್ರಕರಣದ ದೂರುದಾರೆಗೆ ನೋಟಿಸ್ ಜಾರಿ ಮಾಡಿದೆ. ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿಯ ಮುಂದಿನ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಲಾಗಿದೆ.
ಅರ್ಜಿದಾರರ ಪರ ವಕೀಲರು ಪ್ರಕರಣದಲ್ಲಿ ಆರೋಪಿಸಿರುವ ಅಪರಾಧ ಕೃತ್ಯಗಳು ಬಹಳ ವರ್ಷಗಳ ಹಿಂದೆ ನಡೆದಿದ್ದು, ದ್ವೇಷ ಭಾವನೆಯಿಂದ ಅರ್ಜಿದಾರರ ವಿರುದ್ಧ ಸುಳ್ಳು ದಾಖಲಿಸಲಾಗಿದೆ. ವಿಚಾರಣಾ ನ್ಯಾಯಾಲಯ ಆರೋಪಿಗಳ ವಿರುದ್ಧ ಆರೋಪ ನಿಗದಿಪಡಿಸುವ ಪ್ರಕ್ರಿಯೆಯನ್ನು ಆಗಸ್ಟ್ 30 ಕ್ಕೆ ನಿಗದಿಪಡಿಸಿದೆ. ಆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದರು.