ತಿರುವನಂತಪುರಂ: ಅದಾನಿ ನಡೆಸುತ್ತಿರುವ ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಕಂಪನಿಯು ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ.
ತಮ್ಮ ಅಡಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿ(ಸಿಎಒ) ಮಧುಸೂದನ ರಾವ್ ವಿರುದ್ಧ ತುಂಬ್ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ.
ಸೆಕ್ಷನ್ 376 (ಅತ್ಯಾಚಾರ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ ಘಟನೆ ಜನವರಿ 4 ರಂದು ನಡೆದಿದೆ. ಆತನ ವಿರುದ್ಧ ನಮ್ಮ ಬಳಿ ಕೆಲವು ಸಾಕ್ಷ್ಯಾಧಾರಗಳಿವೆ. ತನಿಖೆ ಮುಂದುವರಿದಿದೆ. ಆದರೆ, ಆರೋಪಿ ತನ್ನ ನಿವಾಸದಲ್ಲಿ ಇಲ್ಲ. ಆತನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ಆರೋಪಿ ಮಹಿಳೆಯನ್ನು ತನ್ನ ಅಪಾರ್ಟ್ಮೆಂಟ್ ಗೆ ಆಹ್ವಾನಿಸಿ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ. ವಿಮಾನ ನಿಲ್ದಾಣದ ವಕ್ತಾರರು ಉದ್ಯೋಗಿಯೊಬ್ಬರಿಂದ ಲೈಂಗಿಕ ಕಿರುಕುಳದ ದೂರು ಸ್ವೀಕರಿಸಿದ್ದಾರೆ ಎಂದು ದೃಢಪಡಿಸಿದ್ದಾರೆ.
ತಿರುವನಂತಪುರಂ ವಿಮಾನ ನಿಲ್ದಾಣದ ಉದ್ಯೋಗಿಯೊಬ್ಬರಿಂದ ಲೈಂಗಿಕ ಕಿರುಕುಳದ ಬಗ್ಗೆ ನಮಗೆ ದೂರು ಬಂದಿದೆ. ಅಂತಹ ನಡವಳಿಕೆಯನ್ನು ನಾವು ಸಹಿಸುವುದಿಲ್ಲ. ಪ್ರತಿಯೊಬ್ಬ ಸಿಬ್ಬಂದಿಯ ಸುರಕ್ಷತೆ ಮತ್ತು ಯೋಗಕ್ಷೇಮವು ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಈ ದೂರನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಪ ಕೇಳಿಬಂದ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.