ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದ ಮಾಹಿತಿಯಲ್ಲಿ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 584 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತಿಳಿದುಬಂದಿದ್ದು, ಈ ಪೈಕಿ ಕಲಬುರಗಿಯಲ್ಲಿ ಅತ್ಯಧಿಕ ಅಂದರೆ 75 ಪ್ರಕರಣಗಳು ವರದಿಯಾಗಿವೆ.
ಮೈಸೂರಿನ ‘ಒಡನಾಡಿ’ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ ಕಾನೂನು ಸೇವಾ ಪ್ರಾಧಿಕಾರವು ಈ ಮಾಹಿತಿ ನೀಡಿದ್ದು, ಕಲಬುರಗಿ ನಂತರದ ಸ್ಥಾನದಲ್ಲಿ ಶಿವಮೊಗ್ಗ, ಕೋಲಾರ ಹಾಗೂ ಹಾವೇರಿ ಜಿಲ್ಲೆಗಳಿವೆ. ಈ ಜಿಲ್ಲೆಗಳಲ್ಲಿ ಕ್ರಮವಾಗಿ 47, 46 ಹಾಗೂ 31 ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ.
20ಕ್ಕೂ ಅಧಿಕ ಪ್ರಕರಣಗಳು ನಡೆದಿರುವ ಜಿಲ್ಲೆಗಳ ಸಾಲಿನಲ್ಲಿ ಬೆಂಗಳೂರು ನಗರ, ಮೈಸೂರು, ವಿಜಯಪುರ, ದಕ್ಷಿಣ ಕನ್ನಡ, ತುಮಕೂರು, ಬೆಂಗಳೂರು ಗ್ರಾಮಾಂತರ, ಗದಗ, ರಾಯಚೂರು, ಉಡುಪಿ, ದಾವಣಗೆರೆ, ಉತ್ತರ ಕನ್ನಡ, ಚಿತ್ರದುರ್ಗ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆ ಇವೆ.
ಹಾಸನ ಮತ್ತು ಯಾದಗಿರಿಯಲ್ಲಿ ಅತಿ ಕಡಿಮೆ ಅಂದರೆ ತಲಾ ಒಂದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ವರದಿಯಾಗಿದ್ದು, ಇನ್ನುಳಿದಂತೆ ಬಳ್ಳಾರಿ, ಬೆಳಗಾವಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೀದರ್, ಧಾರವಾಡ, ಮಂಡ್ಯ, ಬಾಗಲಕೋಟೆ ಜಿಲ್ಲೆಗಳಲ್ಲಿ ಒಂದಕ್ಕಿಂತ ಹೆಚ್ಚು ಹಾಗೂ ಹತ್ತಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.